ಭಾರತದ ಖನಿಜಸಂಪತ್ತು ಮತ್ತು ಗಣಿಗಾರಿಕೆ

	ಖನಿಜಗಳಿಗೂ ಖನಿಜೋದ್ಯಮಕ್ಕೂ ಭಾರತ ಪ್ರಾಚೀನ ಕಾಲದಿಂದಲೂ ಅತಿ ಹೆಚ್ಚಿನ ಪ್ರಾಶಸ್ತ್ಯ ನೀಡಿತ್ತೆನ್ನುವುದು ಕೌಟಲ್ಯನ ಅರ್ಥಶಾಸ್ತ್ರದಿಂದ ತಿಳಿದುಬರುತ್ತದೆ. ಖನಿಜಗಳು ಸಂಪತ್ತಿನ ಮೂಲ ಎನ್ನುವುದನ್ನೂ ಅವುಗಳ ಬಲದ ಮೇಲೆ ಸೈನ್ಯವನ್ನು ಕಟ್ಟಿ ಪ್ರಪಂಚವನ್ನೇ ಗೆಲ್ಲಬಹುದೆನ್ನುವುದನ್ನೂ ಆತ ವಿವರಿಸಿ ಹೇಳಿದ. ಖನಿಜಗಳ ಗಣಿಗಾರಿಕೆ ಬಹಳ ಮಹತ್ತ್ವದ್ದಾದ ಕಾರಣ ಅದು ಸರ್ಕಾರದ ವಶದಲ್ಲಿರಬೇಕೆಂದು ಆತ ನಿರ್ಣಯಿಸಿದ್ದ. ಗಣಿಗಳನ್ನು ಯಾವರೀತಿ ನಡೆಸಬೇಕು, ಅವುಗಳಿಂದ ರಾಜಾದಾಯ ಎಷ್ಟು ಪಡೆಯಬೇಕು. ದೇಶದ ಸಂಪತ್ತನ್ನು ಯಾವರೀತಿ ಅಭಿವೃದ್ಧಿಗೊಳಿಸಬೇಕು ಎನ್ನುವುದನ್ನು ವಿವರಿಸಿದ್ದಾನೆ. ಭಾರತದಲ್ಲಿ ಗಣಿಗಾರಿಕೆ ಎರಡು ಸಾವಿರ ವರ್ಷಗಳಿಗೂ ಹಳೆಯದೆಂದೂ ಈ ಕೈಗಾರಿಕೆ ಬಹಳವಾಗಿ ಮುಂದುವರಿದಿತ್ತೆಂದೂ ಅರ್ಥಶಾಸ್ತ್ರದಿಂದ ತಿಳಿದುಬರುತ್ತದೆ. ಕಾಲಾಂತರದಲ್ಲಿ ಮಿಕ್ಕ ಕಲೆಗಳಂತೆ ಖನಿಜವಿದ್ಯೆಯೂ ಗಣಿಗಾರಿಕೆ ಕಲೆಯೂ ಅಖಿಲವಾಗಿ ಭಾರತ ಬಡದೇಶವಾಯಿತು. ನೂರಾರು ವರ್ಷಕಾಲ ದಾಸ್ಯಕ್ಕೊಳಗಾಗಿ ತಗ್ಗಿ ನಡೆಯಬೇಕಾಗಿ ಬಂತು; ಖನಿಜಗಳ ಬಳಕೆಯೇ ಮರೆತು ಹೋಗಿ ಸ್ವಾವಲಂಬನೆಯ ಆಧಾರ ತಪ್ಪಿ ದೇಶ ಹೀನದೆಸೆಗಿಳಿಯಿತು. ಭಾರತ ದೇಶ ಅಭಿವೃದ್ಧಿಯ ದಾರಿಯಲ್ಲಿ ಮುಂದುವರಿಯಬೇಕಾದರೆ ಖನಿಜಸಂಪತ್ತನ್ನು ರೂಢಿಸಿಕೊಳ್ಳಬೇಕು, ಗಣಿಗಾರಿಕೆಯನ್ನು ಅಭಿವೃದ್ಧಿಗೊಳಿಸಬೇಕು ಎನ್ನುವುದು ಸ್ಪಷ್ಟವಾಗಿದೆ.

	ಭಾರತಕ್ಕೆ ಸ್ವಾತಂತ್ರ ಬಂದ ಕಾಲಕ್ಕೆ (1947) ಅರುವತ್ತನಾಲ್ಕು ಕೋಟಿ ರೂಪಾಯಿ ಬಾಳುವ 22 ಖನಿಜಗಳು ಮಾತ್ರ ದೇಶದಲ್ಲಿ ಉತ್ಪತ್ತಿಯಾಗುತ್ತಿದ್ದುವು. 1980ರಲ್ಲಿ ಮುಖ್ಯ ಖನಿಜಗಳ ಸಂಖ್ಯೆ 63ರಕ್ಕೆ ಏರಿತ್ತು. ಮೌಲ್ಯ ರೂ 1.253 ಕೋಟಿ. ಎಂದರೆ ಈ ಮೂವತ್ತು ವರ್ಷಗಳ ಅವಧಿಯಲ್ಲಿ ಖನಿಜೋತ್ಪನ್ನ ಇಪ್ಪತ್ತರಷ್ಟು ಅಬಿವೃದ್ಧಿ ಹೊಂದಿತೆಂದಾಯಿತು. ಮುಂದುವರಿದ ರಾಷ್ಟ್ರಗಳ ಖನಿಜಾಭಿವೃದ್ಧಿ ಮತ್ತು ಗಣಿಗಾರಿಕೆಯ ಬೆಳೆವಣಿಗೆ ಗಮನಿಸಿದರೆ ಭಾರತ ಸಾಧಿಸಬೇಕಾದದ್ದು ಇನ್ನೂ ಬಹಳವಿದೆ.

	ದೇಶದಲ್ಲಿ ದೊರೆಯುವ ಖನಿಜಗಳನ್ನು ವಿವರಣೆಯ ಸೌಲಭ್ಯಕ್ಕಾಗಿ ಮೂರು ಮುಖ್ಯ ವರ್ಗಗಳಾಗಿ ವಿಂಗಡಿಸಬಹುದು: ನಮ್ಮ ಅಗತ್ಯ ಪೂರೈಸುವ ಪ್ರಮಾಣದಲ್ಲಿ ದೊರೆಯುವ ಖನಿಜಗಳು, ಸ್ವಲ್ಪ ಪ್ರಮಾಣದಲ್ಲಿ ದೊರೆತು ಇನ್ನೂ ಅಭಿವೃದ್ಧಿ, ಪಡಿಸುವುದಕ್ಕೆ ಅವಕಾಶವಿರುವ ಖನಿಜ ಸಂಪನ್ಮೂಲಗಳು, ದೇಶದಲ್ಲಿ ದೊರೆಯದೆ ಇರುವ ಖನಿಜಗಳು.

	ಖನಿಜಗಳ ಉಪಯೋಗವನ್ನು ಅನುಸರಿಸಿ ಅವನ್ನು ಇಂಧನ ಖನಿಜಗಳು, ಲೋಹ ಖನಿಜಗಳು ಮತ್ತು ಕೈಗಾರಿಕೆಯಲ್ಲಿ ಉಪಯೋಗವಾಗುವ ಖನಿಜಗಳು ಎಂಬುದಾಗಿ ಕೂಡ ವರ್ಗೀಕರಿಸಬಹುದು.

	ಭಾರತದಲ್ಲಿ ದೊರೆಯುವ ಮುಖ್ಯ ಖನಿಜಗಳೆಲ್ಲವನ್ನೂ ಈ ರೀತಿ ವಿಂಗಡಿಸಿ ಅವನ್ನು ಕೆಳಗಿನ ಪಟ್ಟಿಯಲ್ಲಿ ಕಾಣಿಸಿದೆ.
	ಪಟ್ಟಿ 1. ಭಾರತದಲ್ಲಿ ದೊರೆಯುವ ಮುಖ್ಯ ಖನಿಜ ವರ್ಗಗಳು
ಖನಿಜವರ್ಗ
ಅಗತ್ಯ ಪೂರೈಸುವ ಪ್ರಮಾಣದಲ್ಲಿ ದೊರೆಯುವ ಖನಿಜಗಳು
ಅಲ್ಪ ಪ್ರಮಾಣದಲ್ಲಿ ದೊರೆತು ಇನ್ನೂ ಅಭಿವೃದ್ಧಿಪಡಿಸಬೇಕಾದ ಖನಿಜಗಳು
ದೇಶದಲ್ಲಿ ದೊರೆಯದೆ ಇರುವ ಖನಿಜಗಳು

ಇಂಧನ
ಕಲ್ಲಿದ್ದಲು
ಪೆಟ್ರೋಲ್
-

ಖನಿಜಗಳು

ಲೋಹ ಖನಿಜಗಳು: ಕಬ್ಬಿಣ ಸಂಬಂಧದವು
ಕಬ್ಬಿಣ ಅದುರು ಮ್ಯಾಂಗನೀಸ್ ಅದುರು, ಟೈಟೇ ನಿಯಮ್ ಕ್ರೋಮೈಟ್
ನಿಕ್ಕಲ್
ಮಾಲಿಬ್ಡಿನಮ್ ಕೊಬಾಲ್ಟ್

ಕಬ್ಬಿಣ ಸಂಬಂಧವಿಲ್ಲದವು 
ಅಲ್ಯೂಮಿನಿಯಮ್
ತಾಮ್ರ, ಸೀಸ ಸತುವು
ಟಿನ್

ಇತರ ಲೋಹಗಳು
ತೋರಿಯಮ್
ಯುರೇನಿಯಮ್ ಚಿನ್ನ, ಬೆಳ್ಳಿ ಬೇರಿಯಮ್
ಆ್ಯಂಟಿಮನಿ ಆರ್ಸೆನಿಕ್ ಬಿಸ್ಮತ್ ಪಾದರಸ

ಕೈಗಾರಿಕೆಯಲ್ಲಿ ಉಪಯೋಗವಾಗುವ ಖನಿಜಗಳು
ಸುಣ್ಣಕಲ್ಲು ಡಾಲೊಮೈಟ್ ಜೇಡಿಮಣ್ಣು ಮೈಕ (ಕಾಗೆ ಬಂಗಾರ) ಜಿಪ್ಸಮ್ ಫೋರೈಟ್ ಕಯನೈಟ್ ಮ್ಯಾಗ್ನಸೈಟ್ ಉಪ್ಪು, ವಜ್ರ
ಗ್ರಾಫೈಟ್ ಸಿರ್ಕಾನ್ ಗಂಧಕ ರಂಜಕ ಕಲ್ನಾರು ಪಿರೈಟೀಸ್ ವರ್ಮಿಕ್ಯೂಲೈಟ್

ಪಟ್ಟಿ 2. 1960-77 ಅವಧಿಯಲ್ಲಿ ಭಾರತದ ಖನಿಜೋತ್ಪತ್ತಿಯ ಮೌಲ್ಯ ಸಹಸ್ರ ರೂಪಾಯಿಗಳಲ್ಲಿ
ವರ್ಷ
ಇಂಧನ ಖನಿಜಗಳು
ಲೋಹ ಖನಿಜಗಳು
ಇತರ ಖನಿಜಗಳು
ಒಟ್ಟು

1960-64
14,26,788
3,22,962
3.60,182
21.09,932

(ಸರಾಸರಿ)

1964-69
26,39,150
4,68.678
6,34,702
37,42.530

1970
34,87,118
6,20.212
7,83,358
48,90,688

1971
34,76,357
6,89,194
8,64,522
50,30,073

1972
36.91,729
7,39,376
9,86,266
54,17,351

1973
38,07,471
8,70,272
10,63,756
57,41,499

1974
61,53,657
11,31,726
13,55,611
86,40,994

1975
92,27,252
15,06,661
15,39,877
1,22,73,790

1976
96,76,819
17,77,512
17,25,412
1,31,79,743

1977
96,89,197
17,67,621
10,77,443
1,25,34,261

	ದೇಶದ ಎಲ್ಲ ರಾಜ್ಯಗಳಲ್ಲೂ ಖನಿಜಗಳು ಸಮವಾಗಿ ವಿತರಣೆಗೊಂಡಿಲ್ಲ. ಪಟ್ಟಿ 3ರಲ್ಲಿ ವಿವಿಧ ರಾಜ್ಯಗಳಲ್ಲಿಯ ಖನಿಜೋತ್ಪನ್ನದ ಮೌಲ್ಯವನ್ನು ಕೊಟ್ಟಿದೆ. ಬಿಹಾರ, ಪಶ್ಚಿಮ ಬಂಗಾಳ ಮತ್ತು ಮಧ್ಯಪ್ರದೇಶ ರಾಜ್ಯಗಳು ಕಲ್ಲಿದ್ದಲಿಗೆ ಹೆಸರುವಾಸಿಯಾದವು. ಅದರಿಂದಾಗಿ ಆ ರಾಜ್ಯಗಳು ಮೊದಲ ಸ್ಥಾನ ಪಡೆದಿವೆ. ಅದೇ ರೀತಿ ಈಚಿನ ವರ್ಷಗಳಲ್ಲಿ ಗುಜರಾತ್ ಮತ್ತು ಅಸ್ಸಾಮ್ ರಾಜ್ಯಗಳು ತಮ್ಮಲ್ಲಿ ದೊರೆಯುವ ಪೆಟ್ರೋಲ್ ಖನಿಜದಿಂದಾಗಿ ಮುಂದೆ ಬಂದಿವೆ. ತಮಿಳುನಾಡು ಲಿಗ್ನೈಟ್ ಖನಿಜವನ್ನು ಉತ್ಪಾದಿಸುವುದರಿಂದ ಮುಂದುವರಿದಿದೆ. ಕರ್ನಾಟಕ ರಾಜ್ಯದಲ್ಲಿ ನಾನಾತರದ ಉಪಯುಕ್ತವಾದ ಅನೇಕ ಖನಿಜಗಳು ದೊರೆತರೂ ಇಂಧನ ಖನಿಜಗಳು ಇಲ್ಲದಿರುವುದರಿಂದ ಇದು ಖನಿಜೋತ್ಪಾದನೆಯಲ್ಲಿ ಹನ್ನೊಂದನೆಯ ಸ್ಥಾನ ಪಡೆದಿದೆ. ಖನಿಜ ಸಂಪತ್ತು ಅಷ್ಟು ಹೆಚ್ಚಾಗಿಲ್ಲದ ರಾಜ್ಯಗಳೆಂದರೆ ಕಾಶ್ಮೀರ, ಕೇರಳ, ಹರಿಯಾನ, ಪಂಜಾಬ್, ಮೇಘಾಲಯ ಮತ್ತು ಉತ್ತರ ಪ್ರದೇಶ

ಪಟ್ಟಿ 3. ವಿವಿಧ ರಾಜ್ಯಗಳಲ್ಲಿ 1977ರ ಸಾಲಿನಲ್ಲಿ ಉತ್ಪತ್ತಿಯಾದ ಖನಿಜಗಳ ಮೌಲ್ಯ ಸಹಸ್ರ ರೂಪಾಯಿಗಳಲ್ಲಿ
ರಾಜ್ಯ
ಇಂಧನ ಖನಿಜಗಳು
ಲೋಹ ಖನಿಜಗಳು
ಲೋಹ ಸಂಬಂಧ ವಲ್ಲದ ಖನಿಜಗಳು
ಒಟ್ಟು

ಆಂಧ್ರಪ್ರದೇಶ
6,07,570
16,570
70,224
6,94,364

ಬಿಹಾರ
31,78,380
3,31,560
1,19,510
36,29,450

ಪಶ್ಚಿಮ ಬಂಗಾಳ
17,09,080
322
7,309
17,16,711

ಮಧ್ಯಪ್ರದೇಶ
11,91,800
3,68,018
1,54,592
17,14.410

ಅಸ್ಸಾಮ್
12,87,867
-
1,695
12,89,562

ಗುಜರಾತ್
12,00,987
6,046
73,027
12,80,060

ಒರಿಸ್ಸ
1,34,680
3,59,994
1,41,425
6,36,099

ರಾಜಸ್ಥಾನ
-
2,13,676
2,51,348
4,65,024

ತಮಿಳುನಾಡು
1,64,063
1,797
1,34,904
3,00,764

ಮಹಾರಾಷ್ಟ್ರ
2,09,100
64,779
19,708
2,93,597

ಕರ್ನಾಟಕ
-
2,13,816
35,435
2,49,251

ಕೇರಳ
-
-
11,878
11,878

ಹರಿಯಾಣ
-
-
12,520
12,520

ಹಿಮಾಚಲಪ್ರದೇಶ
-
-
1,828
1,828

ಕಾಶ್ಮೀರ
5,660
-
256
5,916

ದೆಹಲಿ
-
-
869
869

ಗೋವ
-
1,90,435
221
1,90,656

ಮೇಘಾಲಯ
-
-
4,407
4,407

ಪಂಜಾಬ್
-
-
1,271
1,271

ಉತ್ತರಪ್ರದೇಶ
-
553
36,293
36,846

	ಇಂಧನ ಖನಿಜಗಳು. ಕಲ್ಲಿದ್ದಲು: ಭಾರತದ ಖನಿಜ ಸಂಪತ್ತಿನಲ್ಲಿ ಬಲು ಮುಖ್ಯಸ್ಥಾನ ಪಡೆದಿರುವ ಖನಿಜವಿದು. 82.771 ಮಿಲಿಯನ್ ಟನ್ನುಗಳಷ್ಟು ಕಲ್ಲಿದ್ದಲು ದೇಶದಲ್ಲಿ ದೊರೆಯುವುದೆಂದು ಅಂದಾಜು ಮಾಡಲಾಗಿದೆ. ಇದರಲ್ಲಿ 20,557 ಮಿಲಿಯನ್ ಟನ್ ಖಚಿತವಾಗಿ ದೊರೆಯುವ ವರ್ಗಕ್ಕೆ ಸೇರಿದೆ. ಕೋಕ್ ಉತ್ಪಾದನೆಗೆ ಬಳಸಲಾಗುವ ಕಲ್ಲಿದ್ದಲಿನ ಪ್ರಮಾಣ 19.396 ಮಿಲಿಯನ್ ಟನ್. ಕೋಕ್ ತಯಾರಿಕೆಗೆ ಸರಿಹೋಗದ್ದ, ಆದರೆ ರೈಲುಗಾಡಿ ನಡೆಸಲು ಹಬೆ ಮೂಲಕ ವಿದ್ಯುಚ್ಛಕ್ತಿ ಉತ್ಪಾದಿಸಲು ಉಪಯೋಗವಾಗುವ ಕಲ್ಲಿದ್ದಲು ದೊರೆಯುವ ಪ್ರಮಾಣ 63,675 ಮಿಲಿಯನ್ ಟನ್. ಮುಖ್ಯ ನಿಕ್ಷೇಪಗಳು ಪಶ್ಚಿಮಬಂಗಾಳ, ಬಿಹಾರ, ಒರಿಸ್ಸ, ಮಧ್ಯಪ್ರದೇಶ, ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಲ್ಲಿವೆ. ಕೋಕ್ ತಯಾರಿಕೆಗೆ ಅನುಕೂಲಿಸುವ ಕಲ್ಲಿದ್ದಲು ಮುಖ್ಯವಾಗಿ ಬಂಗಾಳ ಬಿಹಾರ ಪ್ರಾಂತ್ಯಗಳಲ್ಲಿ ದೊರೆಯುತ್ತದೆ. ಪೆಟ್ರೋಲ್ ಮತ್ತು ಇಂಧನ ತೈಲಗಳ ಬೆಲೆ ಇತ್ತೀಚಿನ ವರ್ಷಗಳಲ್ಲಿ ವಿಪರೀತವಾಗಿ ಹೆಚ್ಚಿರುವುದರಿಂದ ಕೈಗಾರಿಕೆಗಳು ಕಲ್ಲಿದ್ದಲಿನ ಕಡೆಗೆ ಮನ ತಿರುಗಿಸುತ್ತಿವೆ. ಈ ಕಾರಣವಾಗಿ ಕಲ್ಲಿದ್ದಲಿನ ಉತ್ವತ್ತಿ ಪ್ರತಿ ವರ್ಷವೂ ಹೆಚ್ಚುತ್ತ ಹೋಗುತ್ತಿದೆ. 1970ರಲ್ಲಿ ಉತ್ಪತ್ತಿ 73 ಮಿಲಿಯನ್ ಟನ್ ಮಾತ್ರವಿದ್ದು 1977ರಲ್ಲಿ 100 ಮಿಲಿಯನ್ ಟನ್ ಮಿತಿ ದಾಟಿದೆ. ಅದರ ಮೌಲ್ಯ ರೂ. 707 ಕೋಟಿ.

	ದೇಶದ ಎಲ್ಲ ಕಲ್ಲಿದ್ದಲ ಗಣಿಗಳೂ ಭಾರತ ಸರ್ಕಾರದ ಕೋಲ್ ಇಂಡಿಯಾ ಲಿಮಿಟೆಡ್ (ಸಿಐಲ್) ಎಂಬ ಕಂಪನಿಯ ಸ್ವಾಮ್ಯಕ್ಕೆ ಒಳಪಟ್ಟಿವೆ. ಇದು ಮುಂದಿನ ಹತ್ತು ವರ್ಷಗಳಲ್ಲಿ ಉತ್ಪಾದನೆಯನ್ನು ದ್ವಿಗುಣಗೊಳಿಸುವ ಕಾರ್ಯಕ್ರಮವನ್ನು ಹಾಕಿಕೊಂಡಿದೆ.

	ಗಣಿಯಿಂದ ಹೊರತಗೆದ ಕಲ್ಲಿದ್ದಲಿನಲ್ಲಿ ಇರುವ ಕಳಪೆ ವಸ್ತುಗಳನ್ನು ನಿವಾರಿಸಲು ಕಲ್ಲಿದ್ದಲನ್ನು ತೊಳೆದು ಶುದ್ಧೀಕರಿಸುವ ತೊಳೆಯಂತ್ರ (ವಾಷರಿ) ಸಮುದಾಯಗಳಿವೆ. ಇವು ಉಕ್ಕಿನ ಕೈಗಾರಿಕೆಗೆ ಬೇಕಾಗುವ ಶುದ್ಧ ಕಲ್ಲಿದ್ದಲನ್ನು ಒದಗಿಸುತ್ತವೆ. ಬಿಹಾರ ರಾಜ್ಯದಲ್ಲಿ ಕಾರ್ಗಲಿ, ಕಢಾರ, ಸವಾಂಗ್, ಗಿಡಿ, ದುಗ್ದ, ಭೋಜುಧಿ, ಪತಾರಧಿ ಮತ್ತು ಲೊಢ್ನ ಎಂಬ ಸ್ಥಳಗಳಲ್ಲಿವೆ. ವರ್ಷಂಪ್ರತಿ ಸುಮಾರು 10 ಮಿಲಿಯನ್ ಟನ್ನುಗಳಷ್ಟು ಶುದ್ಧ ಕಲ್ಲಿದ್ದಲನ್ನು ಈ ತೊಳೆಯಂತ್ರಗಳು ಉತ್ಪಾದಿಸಬಲ್ಲವು. ಹಾಗೆ ಶುದ್ಧಿಗೊಳಿಸಿದ ಕಲ್ಲಿದ್ದಲೆಲ್ಲವೂ ಉಕ್ಕಿನ ಕಾರ್ಯಾಗಾರಗಳಿಗೆ ಸರಬರಾಜಾಗುತ್ತದೆ. ಇವೇ ಅಲ್ಲದೆ ಇನ್ನೂ ನಾಲ್ಕು ಮುಖ್ಯ ತೊಳೆಯಂತ್ರಗಳನ್ನು ಬಿಹಾರದ ಸುದಾಮ್ಧಿ, ಮಣಿಧಿ, ರಾಮಗಡ ಮತ್ತು ಕೇಡಿಯ ಹತ್ತಿರ ಸ್ಥಾಪಿಸಲು ಕೋಲ್ ಇಂಡಿಯ ಕ್ರಮಕೈಗೊಂಡಿದೆ.

	ದೇಶದ ಎಲ್ಲ ಕಲ್ಲಿದ್ದಲ ಗಣಿಗಳನ್ನೂ ಸರ್ಕಾರ 1972ರಲ್ಲಿ ತನ್ನ ವಶಕ್ಕೆ ತೆಗೆದುಕೊಂಡಿತು. ಅವುಗಳ ಕಾರ್ಯವನ್ನು ಕೋಲ್ ಇಂಡಿಯ ನೋಡಿಕೊಳ್ಳುತ್ತದೆ. ಇದರ ಅಧೀನದಲ್ಲಿ ಭಾರತ್ ಕೋಕಿಂಗ್ ಕೋಲ್, ಈಸ್ಟರ್ನ್ ಕೋಲ್‍ಫೀಲ್ಡ್ ಲಿಮಿಟೆಡ್ (ಇದು ಪಶ್ಚಿಮ ಬಂಗಾಳದ ರಾಣಿಗಂಜ್ ಗಣಿಗಳನ್ನೂ ಬಿಹಾರದ ಮುಂಗ್ಮ ಗಣಿಗಳನ್ನೂ ನೋಡಿಕೊಳ್ಳುತ್ತದೆ), ಸೆಂಟ್ರಲ್ ಕೋಲ್‍ಫೀಲ್ಡ್ (ಇದು ಬಿಹಾರದ ಉತ್ತರ ಮತ್ತು ದಕ್ಷಿಣ ಕರನಪುರ ಗಣಿಗಳು, ಒರಿಸ್ಸ ರಾಜ್ಯದ ತಾಲಚೇರ್ ಗಣಿಗಳು, ಮಧ್ಯಪ್ರದೇಶದ ಸಿಂಗ್ರೌಲಿ ಗಣಿಗಳು ಇವುಗಳ ಉಸ್ತುವಾರಿ ನೋಡುತ್ತದೆ) ಮತ್ತು ಈಸ್ಟರ್ನ್ ಕೋಲ್‍ಫೀಲ್ಡ್ (ಇದು ಮಹಾರಾಷ್ಟ್ರ, ಮಧ್ಯಪ್ರದೇಶ, ಒರಿಸ್ಸ ರಾಜ್ಯದ ಗಣಿಗಳನ್ನು ನೋಡಿಕೊಳ್ಳುತ್ತದೆ) ಎಂಬ ಅಂಗ ಸಂಸ್ಥೆಗಳಿವೆ. ಆಂಧ್ರಪ್ರದೇಶದಲ್ಲಿರುವ ಸಿಂಗರಣಿ ಗಣಿಗಳು ಆಂಧ್ರ ಮತ್ತು ಭಾರತ ಸರಕಾರದ ಜಂಟಿ ಅಧೀನದಲ್ಲಿವೆ. ಆಂಧ್ರಪ್ರದೇಶದ ಗಣಿಗಳು 1977ರಲ್ಲಿ ಸುಮಾರು ಒಂಬತ್ತು ಮಿಲಿಯನ್ ಟನ್ನುಗಳಷ್ಟು ಕಲ್ಲಿದ್ದಲನ್ನು ಉತ್ಪಾದಿಸಿದುವು. ದಕ್ಷಿಣ ರಾಜ್ಯಗಳಿಗೆಲ್ಲ ಇರುವುದು ಇದೊಂದೇ ಕಲ್ಲಿದ್ದಲ ಗಣಿ.

	ರೈಲು ಎಂಜಿನ್ನುಗಳಿಗೆ ಬೇಕಾಗುವ ಕಲ್ಲಿದ್ದಲನ್ನು ಒದಗಿಸುವ ಸಲುವಾಗಿ ಕಲ್ಲಿದ್ದಲ ಗಣಿಗಾರಿಕೆಯನ್ನು ಪ್ರಾರಂಭಿಸಲಾಯಿತು (1857). ರಾಣಿಗಂಜ್ ಕಲ್ಲಿದ್ದಲ ಗಣಿಗಳು ಮೂರು ವರ್ಷಗಳಲ್ಲಿ ಸುಮಾರು 50,000 ಟನ್ ಮಾತ್ರ ಉತ್ಪಾದಿಸಿದುವು. ಈಗ ಒಟ್ಟು ಉತ್ಪಾದನೆ ಸುಮಾರು 100 ಮಿಲಿಯನ್ ಟನ್ನುಗಳಷ್ಟು ಹೆಚ್ಚಿದೆ. ಕಲ್ಲಿದ್ದಲಿನ ಮುಖ್ಯ ಉಪಯೋಗ ವಿದ್ಯುಚ್ಛಕ್ತಿಯನ್ನು ಉತ್ಪಾದಿಸುವುದರಲ್ಲಿದೆ (22 ಮಿಲಿಯನ್ ಟನ್). ಇದನ್ನು ಬಿಟ್ಟರೆ ಕಬ್ಬಿಣ ಮತ್ತು ಉಕ್ಕಿನ ಉತ್ಪಾದನೆಯಲ್ಲಿ 18 ಮಿಲಿಯನ್ ಟನ್ ಬಳಕೆಯಾಗುತ್ತಿದೆ. ರೈಲು ಎಂಜಿನ್ನಿಗಾಗಿ ಬಳಸಲಾಗುವ ಪ್ರಮಾಣ 14 ಮಿಲಿಯನ್ ಟನ್ ಮಾತ್ರ.

	ಅಭಿವೃದ್ಧಿಯ ಹಾದಿಯಲ್ಲಿ ದೇಶ ಮುಂದುವರಿದಂತೆ ಕಲ್ಲಿದ್ದಲಿನ ಉಪಯೋಗ ಹೆಚ್ಚುತ್ತ ಹೋಗುತ್ತದೆ. ಸ್ವಲ್ಪ ಕಾಲ ಸುಲಭವಾಗಿ ದೊರೆಯುತ್ತಿದ್ದ ಪೆಟ್ರೋಲಿನಿಂದಾಗಿ ಕಲ್ಲಿದ್ದಲು ತನ್ನ ಪ್ರಾಮುಖ್ಯ ಕಳೆದುಕೊಂಡಿತ್ತು. 1973ರಿಂದೀಚೆಗೆ ಪಟ್ರೋಲಿನ ಬೆಲೆ ವಿಪರೀತವಾಗಿ ಏರಿಹೋಗಿರುವುದರಿಂದಲೂ ಅದನ್ನು ದೊರಕಿಸಿಕೊಳ್ಳುವುದು ಕಷ್ಟವಾಗಿರುವುದರಿಂದಲೂ ಮತ್ತೆ ಕಲ್ಲಿದ್ದಲಿನ ಕಡೆಗೆ ಹೆಚ್ಚು ಗಮನ ಕೊಡಲಾಗುತ್ತಿದೆ.
ಪಟ್ಟಿ 4. ವಿವಿಧ ರಾಜ್ಯಗಳಲ್ಲಿ ಕಲ್ಲಿದ್ದಲಿನ ಉತ್ಪಾದನ (1977ರಲ್ಲಿ)
ರಾಜ್ಯ

ಉತ್ಪಾದನ (ಟನ್ನುಗಳಲ್ಲಿ)

ಮೌಲ್ಯ (ಸಹಸ್ರ ರೂಪಾಯಿಗಳಲ್ಲಿ)

ಆಂಧ್ರ

. . .
87,90,000
. . .
6,07,570

ಅಸ್ಸಾಮ್
. . .
6,10,000
. . .
40,500

ಬಿಹಾರ್
. . .
4,13,10,100
. . .
31,78,380

ಕಾಶ್ಮೀರ್
. . .
27,000
. . .
5,660

ಮಧ್ಯಪ್ರದೇಶ
. . .
2,01,00,000
. . .
11,91,800

ಮಹಾರಾಷ್ಟ್ರ
. . .
35,10,000
. . .
2,69,110

ಒರಿಸ್ಸ
. . .
21,50,000
. . .
1,34,680

ಪಶ್ಚಿಮ ಬಂಗಾಳ
. . .
2,38,00,000
. . .
17,09,080

ಒಟ್ಟು

10,02,97,000

17,09,780

	ಲಿಗ್ನೈಟ್: ಕಲ್ಲಿದ್ದಲಿಗಿಂತ ಸ್ವಲ್ಪ ಕಡಿಮೆ ದರ್ಜೆಯ ಇಂಧನ ಖನಿಜ ಲಿಗ್ನೈಟ್. ಒಟ್ಟು ದೇಶದಲ್ಲಿ ಸುಮಾರು 2,100 ಮಿಲಿಯನ್‍ಟನ್ನುಳಷ್ಟು ಲಿಗ್ನೈಟ್ ದೊರೆಯುವುದೆಂದು ಅಂದಾಜು. ಇದರಲ್ಲಿ ಸುಮಾರು 1,900 ಮಿಲಿಯನ್‍ಟನ್ನುಗಳು ತಮಿಳುನಾಡಿನ ನೈವೇಲಿ ಪ್ರಾಂತ್ಯದಲ್ಲಿವೆ. ಮುಖ್ಯವಾದ ಗಣಿ ಇರುವುದು ಕಡಲೂರಿನ ಬಳಿ ಇರುವ ನೈವೇಲಿಯಲ್ಲಿ. ಅಗಾಧ ಕಮರಿಯಂತಿರುವ ಇಲ್ಲಿಯ ಬೃಹದಾಕಾರದ ಗಣಿಯಿಂದ ವರ್ಷಂಪ್ರತಿ ಸುಮಾರು 3.8 ಮಿಲಿಯನ್‍ಟನ್ನುಗಳಷ್ಟು ಲಿಗ್ನೈಟನ್ನು ಉತ್ಪಾದಿಸಲಾಗುತ್ತಿದೆ. 1980-81ರ ಹೊತ್ತಿಗೆ ಉತ್ಪಾದನೆಯನ್ನು 6.5 ಮಿಲಿಯನ್‍ಟನ್ನುಗಳಷ್ಟು ಹೆಚ್ಚಿಸಲು ಯೋಜನೆ ರೂಪಿತವಾಗಿದೆ. ದಕ್ಷಿಣ ಭಾರತದಲ್ಲಿ ವಿದ್ಯುಚ್ಛಕ್ತಿ ಉತ್ಪಾದನೆ ಕಡಿಮೆ ಆಗುತ್ತಿರುವುದರಿಂದ ಇನ್ನೊಂದು ಗಣಿಯನ್ನು ನೈವೇಲಿಯ ಬಳಿಯಲ್ಲೆ ತೆರೆದು ಸುಮಾರು ಏಳು ಮಿಲಿಯನ್ ಟನ್ ಉತ್ಪಾದನೆ ಮಾಡಿ ಅದರಿಂದ ವಿದ್ಯುಚ್ಛಕ್ತಿ ಪಡೆಯಲು ಯೋಚಿಸಲಾಗಿದೆ. ಈಗ ಉತ್ಪಾದಿಸುತ್ತಿರುವ ಲಿಗ್ನೈಟಿನ ಒಟ್ಟು ಮೌಲ್ಯ 165,927,000 ರೂ. ತಮಿಳುನಾಡಿನ ಗಣಿಕೈಗಾರಿಕೆಯಲ್ಲಿ ಲಿಗ್ನೈಟ್ ಗಣಿಗಾರಿಕೆ ಮುಖ್ಯಸ್ಥಾನ ಪಡೆದುಕೊಂಡಿದೆ.
ಪಟ್ಟಿ 5. ಲಿಗ್ನೈಟ್ ಉತ್ಪಾದನೆ (1971ರಲ್ಲಿ)
ರಾಜ್ಯ
ಉತ್ಪಾದನೆ (ಟನ್ನುಗಳಲ್ಲಿ)
ಮೌಲ್ಯ (ಲಕ್ಷ ರೂಪಾಯಿಗಳಲ್ಲಿ)

ಗುಜರಾತ್
33.891
. . .
1,864

ತಮಿಳುನಾಡು
35,98,580
. . .
1,64,063

ಒಟ್ಟು
36,32,471
. . .
1,65,927

	ಪೆಟ್ರೋಲ್: ಪೆಟ್ರೋಲ್ ದ್ರವರೂಪದಲ್ಲಿರುವ ಅತಿ ಮುಖ್ಯ ಇಂಧನ ಖನಿಜ. ಇದರ ಬಳಕೆಯಿಂದ ಕೈಗಾರಿಕೆಗಳಲ್ಲಿ ದೊಡ್ಡ ಕ್ರಾಂತಿಯಾಗುತ್ತ ಬಂದಿದೆ. ಭಾರತದ ಮೊದಲ ಪೆಟ್ರೋಲ್ ಬಾವಿಯನ್ನು 1870ರಲ್ಲಿ ಅಸ್ಸಾಮಿನ ದಿಗ್ಬಾಯ್ ಎಂಬ ಪ್ರದೇಶದಲ್ಲಿ ಕೊರೆಯಲಾಯಿತು.
	ಸದ್ಯದಲ್ಲಿ ಪೆಟ್ರೋಲಿಯಮ್ ಉತ್ಪಾದನೆ ಅಸ್ಸಾಮ್ ಮತ್ತು ಗುಜರಾತ್ ರಾಜ್ಯಗಳಿಗೆ ಸೀಮಿತವಾಗಿದೆ. ಈ ರಾಜ್ಯಗಳ ಶಿಲೆಗಳಲ್ಲಿ ಸುಮಾರು 700 ಮಿಲಿಯನ್‍ಟನ್ನುಗಳಷ್ಟು ಎಣ್ಣೆ ಇರುವುದಾಗಿ ಅಂದಾಜು. ಆದರೆ ಇದರಿಂದ ಸುಮಾರು 200 ಮಿಲಿಯನ್ ಟನ್ನುಗಳಷ್ಟು ಮಾತ್ರ ಉತ್ಪಾದಿಸುವುದು ಸಾಧ್ಯ. 1950ರ ತನಕ ಬರ್ಮಾ ಅಯಿಲ್ ಕಂಪನಿ ಎಂಬ ಸಂಸ್ಥೆ ಅಸ್ಸಾಮ್ ರಾಜ್ಯದಲ್ಲಿ (ದಿಗ್ಬಾಯ್, ನಾಹೊರ್‍ಕಟಿಯಾ ಮತ್ತು ಮೊರಾನುಗಳಬಳಿ) ಎಣ್ಣೆ ಉತ್ಪಾದನೆ ಮಾಡುತ್ತಿತ್ತು. ದೇಶಕ್ಕೆ ಸ್ವಾತಂತ್ರ ಬಂದಮೇಲೆ 1956ರಲ್ಲಿ ಎಣ್ಣೆಯ ಅನ್ವೇಷಣೆಗಾಗಿಯೇ ತೈಲ ಮತ್ತು ನೈಸರ್ಗಿಕಾನಿಲ ಆಯೋಗ (ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಮಿಶನ್, ಓಎನ್‍ಜಿಸಿ) ಎಂಬ ಸಂಸ್ಥೆ ಸ್ಥಾಪಿತವಾಯಿತು. 1960ರಲ್ಲಿ ಗುಜರಾತಿನ ಕ್ಯಾಂಬೆ ಪ್ರಾಂತ್ಯದಲ್ಲಿ ನಡೆಸಿದ ಶೋಧನೆಯ ಫಲವಾಗಿ ಮೊದಲಿಗೆ ಅಂಕಲೇಶ್ವರ ಕಲೋಲ್ ಮತ್ತು ನವಗಾಮ್ ಬಳಿ ಎಣ್ಣೆ ದೊರೆಯುವುದು ಕಂಡುಬಂದಿತು. ಅಲ್ಲಂದೀಚೆಗೆ ಈ ಸ್ಥಳಗಳಿಂದಲೂ ಎಣ್ಣೆ ಉತ್ವತ್ತಿಯಾಗುತ್ತಿದೆ.
ಪಟ್ಟಿ 6: ಭಾರತದಲ್ಲಿ ಪೆಟ್ರೋಲ್ ಉತ್ಪಾದನೆ (1977ರಲ್ಲಿ)
ರಾಜ್ಯ

ಪ್ರಮಾಣ (ಟನ್ನುಗಳಲ್ಲಿ)

ಮೌಲ್ಯ (ಸಾವಿರ ರೂಪಾಯಿಗಳು)

ಅಸ್ಸಾಮ್
. . .
4,475,000
. . .
1,230,625

ಗುಜರಾತ್
. . .
4,221,000
. . .
1,160,775

	ಭೂಖಂಡ ಮೇಲೆ ಅಲ್ಲದೆ ಸಮುದ್ರದಿಂದ ಆವೃತವಾಗಿರುವ ಕರಾವಳಿ ಅಂಚಿನಲ್ಲಿ ಕೂಡ ಎಣ್ಣೆಗಾಗಿ ಶೋಧನೆ ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತ ಬಂದಿದೆ. ಮುಂಬಯಿಯ ಪಶ್ಚಿಮಕ್ಕೆ ಸಮುದ್ರ ಮಧ್ಯದಲ್ಲಿ ಕೊರೆದ (1974) ಮೊದಲಬಾವಿ ಎಣ್ಣೆಯನ್ನು ಉತ್ಪಾದಿಸಿತು. ಈ ಕೇಂದ್ರದಿಂದ ಈಗ ಸುಮಾರು ಎರಡು ಮಿಲಿಯನ್ ಟನ್ನುಗಳಷ್ಟು ಎಣ್ಣೆ ಉತ್ಪತ್ತಿಯಾಗುತ್ತದೆ. ಕ್ರಮೇಣ ಉತ್ಪಾದನೆ ಹತ್ತು ಮಿಲಿಯನ್‍ಟನ್ನುಗಳಷ್ಟು ಗಾತ್ರ ಮುಟ್ಟುವ ನಿರೀಕ್ಷೆ ಇದೆ.
	ಪೆಟ್ರೋಲ್ ಎಣ್ಣೆಯ ಉತ್ಪಾದನೆ ಯಾವ ರೀತಿ ಕಳೆದ ಹದಿನೈದು ವರ್ಷಗಳಲ್ಲಿ ಹೆಚ್ಚಿದೆ ಎನ್ನುವುದನ್ನು ಕೆಳಗಿನ ಪಟ್ಟಿಯಲ್ಲಿ ಕಾಣಿಸಿದೆ.
	ಪಟ್ಟಿ 7: ಭಾರತದಲ್ಲಿ ಪೆಟ್ರೋಲ್ ಉತ್ಪಾದನೆಯ ಪ್ರಗತಿ (1960-77)
ಇಸವಿ
ಪ್ರಮಾಣ
ಮೌಲ್ಯ

(ಸಾವಿರ ಟನ್ನುಗಳಲ್ಲಿ)
(ಸಾವಿರ ರೂಪಾಯಿಗಳಲ್ಲಿ

1960-64
. . .
1,181
. . .
77,958

1964-69
. . .
5,182
. . .
473,685

1970
. . .
6,809
. . .
735,400

1971
. . .
7,185
. . .
761,600

1972
. . .
7,373
. . .
781,538

1973
. . .
7,198
. . .
829,940

1974
. . .
7,490
. . .
1,720,428

1975
. . .
8,283
. . .
2,276,168

1976
. . .
8,430
. . .
2,316,564

1977
. . .
8,696
. . .
2,391,400

ಬೊಂಬೇ ಹೈ ಪ್ರದೇಶದಿಂದ 1977ರಲ್ಲಿ ಉತ್ಪಾದಿತವಾದ 1.5 ಮಿಲಿಯನ್ ಟನ್ ಎಣ್ಣೆ ಈ ಪಟ್ಟಿಯಲ್ಲಿ ಸೇರಿಲ್ಲ.
ಬೊಂಬೇ ಹೈ: ಪೆಟ್ರೋಲಿಯಮ್ ಬಳಕೆ ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿದೆ. ಈಗ ದೇಶಕ್ಕೆ ವಾರ್ಷಿಕವಾಗಿ ಮೂವತ್ತು ಮಿಲಿಯನ್ ಟನ್ನುಗಳಷ್ಟು ಎಣ್ಣೆ ಬೇಕಾಗಿದೆ. ದೇಶದಲ್ಲಿ ಉತ್ಪಾದನೆ ಆಗುತ್ತಿರುವುದು ಎಂಟು ಮಿಲಿಯನ್ ಟನ್ ಮಾತ್ರ. ಬೊಂಬೇ ಹೈನಿಂದ ಇನ್ನೊಂದು ಹತ್ತು ಮಿಲಿಯನ್ ಟನ್ ಉತ್ಪಾದನೆ ಆಗಬಹುದು. ಹಾಗಾದರೂ ಇನ್ನೂ ಹತ್ತು ಮಿಲಿಯನ್ ಟನ್ ಎಣ್ಣೆಯನ್ನು ಆಮದು ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕೆ ಬೇಕಾಗುವ ವಿದೇಶೀ ವಿನಿಮಯ ಹಣ ಅಪಾರ. ಸ್ವಾವಲಂಬನೆಯ ಆಧಾರದ ಮೇಲೆ ಭವಿಷ್ಯವನ್ನು ರೂಪುಗೊಳಿಸಬೇಕಾದರೆ ಪೆಟ್ರೋಲ್ ಬಳಕೆ ಕಡಿಮೆ ಮಾಡದೆ ವಿಧಿ ಇಲ್ಲ.
ಲೋಹ ಖನಿಜಗಳು. ಕಬ್ಬಿಣದ ಅದುರು: ಕಬ್ಬಿಣದ ಅದುರು ಭಾರತದ ಖನಿಜ ಸಂಪತ್ತಿನಲ್ಲಿ ಎರಡನೆಯ ಸ್ಥಾನಪಡೆದಿದೆ. ದೇಶದಲ್ಲಿ ದೊರೆಯುವ ಅದುರಿನ ಪ್ರಮಾಣ 10,536 ಮಿಲಿಯನ್ ಟನ್ನುಗಳೆಂದು ಅಂದಾಜು. ಕಬ್ಬಿಣದ ಅದುರನ್ನು ವಿಶೇಷವಾಗಿ ಹೊಂದಿರುವ ದೇಶಗಳಲ್ಲಿ ಭಾರತಕ್ಕೆ ಮುಖ್ಯಸ್ಥಾನ ಉಂಟು.
ಕಬ್ಬಿಣ ಅದುರಿನ ಗಣಿಗಾರಿಕೆಯನ್ನು ಮೂರು ಮುಖ್ಯ ವರ್ಗಗಳಾಗಿ ವರ್ಗೀಕರಿಸಬಹುದು: 1 ಕಬ್ಬಿಣ ಮತ್ತು ಉಕ್ಕು ಲೋಹ ತಯಾರಿಸುವ ಕಾರ್ಖಾನೆಗಳು, ಲೋಹ ಉತ್ಪಾದನೆಗಾಗಿ ಬೇಕಾಗುವ ಅದುರನ್ನು ಪಡೆಯುವುದಕ್ಕಾಗಿ ಸ್ಥಾಪಿಸಿರುವ ಗಣಿಗಳು; 2 ಭಾರತ ಸರ್ಕಾರ ಅದುರನ್ನು ವಿದೇಶಗಳಿಗೆ ಅತಿ ಹೆಚ್ಚು ಪ್ರಮಾಣದಲ್ಲಿ ರಫ್ತುಮಾಡಲೆಂದೇ ಸ್ಥಾಪಿಸಿರುವ ಸಂಸ್ಥೆ. ನ್ಯಾಷನಲ್ ಮಿನರಲ್ ಡೆವಲಪ್‍ಮೆಂಟ್ ಕಾರ್ಪೊರೇಷನ್ (ಎನ್.ಎಂ.ಡಿ.ಸಿ.); 3 ಖಾಸಗಿಯವರು ನಡೆಸುತ್ತಿರುವ ಸಣ್ಣ ಗಣಿಗಳು. ಖಾಸಗಿಯವರ ವಶದಲ್ಲಿರುವ ಗಣಿಗಳು ಮುಖ್ಯವಾಗಿ ಒರಿಸ್ಸಾ ರಾಜ್ಯದಲ್ಲೂ ಕರ್ನಾಟಕದ ಬಳ್ಳಾರಿ ಹೊಸಪೇಟೆ ಪ್ರದೇಶದಲ್ಲೂ ಇವೆ.
	1977ರಲ್ಲಿ ಕಬ್ಬಿಣದ ಅದುರಿನ ಉತ್ಪಾದನೆ 42 ಮಿಲಿಯನ್ ಟನ್. ಅದರ ಮೌಲ್ಯ ರೂ 865,094,000. ಕಬ್ಬಿಣದ ಅದುರನ್ನು ಉತ್ಪಾದಿಸುವ ಮುಖ್ಯ ರಾಜ್ಯಗಳನ್ನೂ 1977ರಲ್ಲಿ ಉತ್ಪಾದಿಸಲಾದ ಅದುರಿನ ಪ್ರಮಾಣ ಮತ್ತು ಮೌಲ್ಯವನ್ನೂ ಪಟ್ಟಿ 8ರಲ್ಲಿ ಕಾಣಿಸಿದೆ.
ಪಟ್ಟಿ 8. ಭಾರತದ ವಿವಿಧ ರಾಜ್ಯಗಳಲ್ಲಿ ಕಬ್ಬಿಣದ ಅದುರಿನ ಉತ್ಪನ್ನ (1977)
ರಾಜ್ಯ

ಉತ್ಪತ್ತಿ (ಸಾವಿರ ಟನ್ನುಗಳಲ್ಲಿ)

ಮೌಲ್ಯ (ಸಾವಿರ ರೂಪಾಯಿಗಳಲ್ಲಿ)

ಆಂಧ್ರ
. . .
84.805
. . .
908

ಬಿಹಾರ
. . .
6905.7
. . .
176,139

ಗೋವ
. . .
12828.186
. . .
187,066

ಕರ್ನಾಟಕ
. . .
3071.552
. . .
29,412

ಮಧ್ಯಪ್ರದೇಶ
. . .
11239.704
. . .
296,968

ಮಹಾರಾಷ್ಟ್ರ
. . .
960.834
. . .
24,862

ಒರಿಸ್ಸ
. . .
7390.517
. . .
149,916

	ಗೋವಾ ರಾಜ್ಯದಲ್ಲಿ ಕಬ್ಬಿಣದ ಗಣಿ ಕೈಗಾರಿಕೆ ಚೆನ್ನಾಗಿ ಅಭಿವೃದ್ಧಿ ಹೊಂದಿದೆ. ಈ ಸಣ್ಣ ರಾಜ್ಯ ಸುಮಾರು ಹದಿಮೂರು ಮಿಲಿಯನ್ ಟನ್ನುಗಳನ್ನು ಉತ್ಪಾಡಿಸಿ ಕಬ್ಬಿಣದ ಅದುರಿನ ಉತ್ಪಾದನೆಯಲ್ಲಿ ಅಗ್ರಸ್ಥಾನ ಪಡೆದಿದೆ. ಅದುರೆಲ್ಲವೂ ಮುಖ್ಯವಾಗಿ ಜಪಾನ್ ಮತ್ತು ಇತರ ದೇಶಗಳಿಗೆ ರಫ್ತಾಗುತ್ತದೆ.

	ಚೌಗಲೆ ಕಂಪನಿಯವರು ಕಬ್ಬಿಣದ ಅದುರಿನ ದೂಳನ್ನು ಉಂಡೆಗಟ್ಟಿ ಅದರಿಂದ ಗೋಲಿ ಉಂಡೆಗಳನ್ನು ತಯಾರಿಸುತ್ತಾರೆ. ಗೋವಾ ರಾಜ್ಯದ ಪಾಲೆ ಬಳಿ ಇವರ ಪೆಲೆಟ್ (ಗೋಲಿ ಉಂಡೆ) ಕಾರ್ಖಾನೆ ಇದೆ. ವರ್ಷಂಪ್ರತಿ ಸುಮಾರು 600,000 ಟನ್ ಪೆಲೆಟುಗಳು ಇಲ್ಲಿ ತಯಾರಿಸಿ ಜಪಾನಿಗೆ ರವಾನಿಸಲಾಗುತ್ತಿದೆ. ಮರ್ಮ ಗೋವ ಬಂದರಿನ ಹತ್ತಿರ ಇನ್ನೊಂದು ಇಂತಹುದೇ ಕಾರ್ಖಾನೆ ಚೌಗಲೆ ಕಂಪನಿಯವರ ಉಸ್ತುವಾರಿಯಲ್ಲಿ ರೂಪುಗೊಳ್ಳುತ್ತಿದೆ. ಇದರಲ್ಲಿ ವರ್ಷಂಪ್ರತಿ 1,800,000 ಟನ್ ಪೆಲೆಟುಗಳನ್ನು ತಯಾರಿಸಲಾಗುತ್ತಿದೆ.

	ಕರ್ನಾಟಕ ರಾಜ್ಯದ ಚಿಕ್ಕ ಮಗಳೂರು ಜಿಲ್ಲೆಯ ಕುದುರೆಮುಖದ ಬಳಿ ದೊರೆಯುವ ಹೇರಳವಾದ ಮ್ಯಾಗ್ನಟೈಟ್ ಅದುರನ್ನು ಬಳಕೆಗೆ ತರಲು ದೊಡ್ಡದೊಂದು ಯೋಜನೆ ರೂಪಿತವಾಗಿ ಕಾರ್ಯಕ್ರಮ ಭರದಿಂದ ಸಾಗುತ್ತಿದೆ. ಇಲ್ಲಿಯ ಗಣಿಗಳಿಂದ ವರ್ಷಂಪ್ರತಿ 7,500,000 ಟನ್ನುಗಳಷ್ಟು ಶುದ್ಧೀಕರಿಸಿದ ಅದುರನ್ನು ಉತ್ಪಾದಿಸಬೇಕೆಂದಿದೆ. ಸುಮಾರು 1820 ಮೀ ಎತ್ತರದಲ್ಲಿರುವ ಕುದುರೆಮುಖ ಪ್ರದೇಶದಿಂದ ಸಮುದ್ರದ ಮಟ್ಟದಲ್ಲಿರುವ ಮಂಗಳೂರು ಬಂದರಿಗೆ ಶುದ್ಧೀಕರಿಸಿದ ಅದುರನ್ನು ಒಯ್ಯಲು ಕೊಳಾಯಿ ಮಾರ್ಗ ಒಂದನ್ನು ನಿರ್ಮಿಸಲಾಗಿದೆ. ಕಬ್ಬಿಣ ಅದುರಿನ ಸಾರವನ್ನು ನೀರಿನೊಂದಿಗೆ ಬೆರೆಸಿ ಕೆನೆಯ ರೂಪದಲ್ಲಿ ಪೈಪುಗಳ ಮೂಲಕ ಮಂಗಳೂರಿಗೆ ಕಳುಹಿಸಲಾಗುತ್ತಿದೆ. ಈ ಗಣಿ ಉದ್ಯಮ ಭಾರತದಲ್ಲಿ ಏಕೆ ಪೂರ್ವ ಏಷ್ಯಾದಲ್ಲಿಯೇ ಅತ್ಯಂತ ಭಾರಿ ಪ್ರಮಾಣದ ಉದ್ಯಮವೆಂದು ಪರಿಗಣಿಸಲಾಗಿದೆ.

	ಪಶ್ಚಿಮ ಘಟ್ಟದ ಶ್ರೇಣಿಗಳಲ್ಲಿ ಹೆಸರಾಂತ ಕುದುರೆಮುಖ, ಗಂಗ್ರಿಕಲ್ಲು, ಗಂಗಾ ಮೂಲ, ಅಗುಂಬೆ, ಕೊಡಚಾದ್ರಿ, ಬಾಬಾಬುಡನ್ ಮೊದಲಾದ ಪರ್ವತ ಪ್ರದೇಶಗಳಲ್ಲಿ ಹೇರಳವಾಗಿ ಕಬ್ಬಿಣ ಅದುರು ದೊರೆಯುತ್ತದೆ. ಇವೂ ಒಂದಾದ ಮೇಲೆ ಒಂದು ಗಣಿ ಕೈಗಾರಿಕೆ ಕೇಂದ್ರಗಳಾಗಿ ಪರಿವರ್ತನೆಗೊಳ್ಳುವ ಸೂಚನೆ ಉಂಟು. ಇಲ್ಲಿ ದೊರೆಯುವ ಕಬ್ಬಿಣ ಅದುರಿನ ಆಧಾರದ ಮೇಲೆ ಮಂಗಳೂರು ಬಳಿ ಬೃಹತ್ ಪ್ರಮಾಣದಲ್ಲಿ ಉಕ್ಕನ್ನು ತಯಾರಿಸುವ ಯೋಜನೆಯೊಂದು ರೂಪುಗೊಳ್ಳುತ್ತಿದೆ.
	ನ್ಯಾಷನಲ್ ಮಿನರಲ್ ಡೆವಲಪ್‍ಮೆಂಟ್ ಕಾರ್ಪೊರೇಷನ್ ಅವರು ಮಧ್ಯ ಪ್ರದೇಶದ ಬೈಲಾಡಿಬಳಿ ಕಬ್ಬಿಣದ ಅದುರಿನ ದೊಡ್ಡ ಗಣಿಯನ್ನು ಸ್ಥಾಪಿಸಿದ್ದಾರೆ. ಇಲ್ಲಿಂದ ವರ್ಷಂಪ್ರತಿ ಸುಮಾರು ಆರು ಮಿಲಿಯನ್ ಟನ್ನುಗಳಷ್ಟು ಅದುರನ್ನು ಪಡೆದು ವಿಶಾಖಪಟ್ಟಣ ಬಂದರಿಗೆ ರವಾನಿಸಿ ಜಪಾನಿಗೆ ರಫ್ತು ಮಾಡಲಾಗುತ್ತಿದೆ. ಬಳ್ಳಾರಿ ಜಿಲ್ಲೆಯ ಸೊಂಡೂರಿನ ದೋಣಿಮಲೆ ಗುಡ್ಡದಲ್ಲಿ ಮುಖ್ಯವಾದ ಗಣಿ ಕೈಗಾರಿಕೆ ಸ್ಥಾಪಿಸಲಾಗಿದೆ. ಇಲ್ಲಿ ವರ್ಷಂಪ್ರತಿ 1.5 ಮಿಲಿಯನ್ ಟನ್ನುಗಳನ್ನು ಉತ್ಪಾದಿಸಲಾಗುವುದು.
	ತಾತಾನಗರ, ಬೊಕಾರೋ, ದುರ್ಗಾಪುರ, ರೂರ್ಕೆಲ, ಭಿಲಾಯ್ ಸ್ಥಳಗಳಲ್ಲಿ ಸ್ಥಾಪಿಸಲಾಗಿರುವ ಬೃಹತ್ ಪ್ರಮಾಣದ ಕಬ್ಬಿಣ ಮತ್ತು ಉಕ್ಕು ಕಾರ್ಯಾಗಾರಗಳಿಗೆ ಬೇಕಾಗುವ ಅದುರನ್ನು ಬಿಹಾರ ಮತ್ತು ಮಧ್ಯಪ್ರದೇಶಗಳಲ್ಲಿಯ ಗಣಿಗಳು ಒದಗಿಸುತ್ತವೆ.
	42 ಮಿಲಿಯನ್ ಟನ್ನುಗಳಷ್ಟು ಒಟ್ಟು ಅದುರಿನ ಉತ್ಪಾದನೆಯಲ್ಲಿ 23 ಮಿಲಿಯನ್ ಟನ್ ರಫ್ತಾಗುತ್ತದೆ. ಅದರಿಂದ ಸುಮಾರು ರೂ. 232 ಕೋಟಿ ವಿದೇಶಿ ವಿನಿಮಯ ಹಣವನ್ನು ಗಳಿಸಲಾಗುತ್ತಿದೆ. ಕಬ್ಬಿಣ ಮತ್ತು ಉಕ್ಕನ್ನು ತಯಾರಿಸುವ ಯಂತ್ರ ಸ್ಥಾವರಗಳು ಭಿಲಾಯ್, ರೂರ್ಕೆಲ, ಬೊಕಾರೋ, ದುರ್ಗಾಪುರ, ಜಂಷೆಡ್‍ಪುರ ಮತ್ತು ಕರ್ನಾಟಕ ರಾಜ್ಯದ ಭದ್ರಾವತಿ ಬಳಿ ಇವೆ. ಇವುಗಳಿಂದ ಒಟ್ಟು ಸುಮಾರು 13 ಮಿಲಿಯನ್ ಟನ್ನುಗಳಷ್ಟು ಉಕ್ಕನ್ನು ಉತ್ಪಾದಿಸಬಹುದು. 1977ರಲ್ಲಿ ಉಕ್ಕಿನ ಉತ್ಪತ್ತಿ ಸುಮಾರು ಏಳು ಮಿಲಿಯನ್ ಟನ್ನುಗಳು ಮಾತ್ರವಾಗಿತ್ತು.
	ಆಂಧ್ರಪ್ರದೇಶದ ವಿಶಾಖಪಟ್ಟಣ, ತಮಿಳುನಾಡಿನ ಸೇಲಮ್, ಕರ್ನಾಟಕದ ಹೊಸಪೇಟೆ ಈ ಸ್ಥಳಗಳಲ್ಲಿ ಉಕ್ಕು ತಯಾರಿಸುವ ಕಾರ್ಖಾನೆಗಳನ್ನು ಸ್ಥಾಪಿಸಬೇಕೆನ್ನುವ ನಿರ್ಧಾರ ಕೈಗೊಂಡು ಈ ಸ್ಥಳಗಳಲ್ಲೆಲ್ಲ ಶಂಕುಸ್ಥಾಪನೆಯಾಗಿ ಸೇಲಮ್ ಮತ್ತು ವಿಶಾಖಪಟ್ಟಣ ಬಳಿ ಸ್ವಲ್ಪ ಮಟ್ಟಿಗೆ ಕೆಲಸ ನಡೆದಿದೆ. ಹೊಸಪೇಟೆಯ ಬಳಿ ಕಾರ್ಖಾನೆ ಇನ್ನೂ ಸ್ಥಾಪನೆಯಾಗುವುದರಲ್ಲಿದೆ. ಪಶ್ಚಿಮ ಕರಾವಳಿ ಪ್ರದೇಶದಲ್ಲಿ ಮಂಗಳೂರಿನ ಬಳಿ ಉಕ್ಕಿನ ಯಂತ್ರಸ್ಥಾವರ ಸ್ಥಾಪನೆಯಾಗುವ ನಿರೀಕ್ಷೆ ಉಂಟು.
	ಜಂಷೆಡ್‍ಪುರದಲ್ಲಿಯ ತಾತಾ ಕಂಪನಿ ಹೊರತಾಗಿ ಮಿಕ್ಕೆಲ್ಲ ಉಕ್ಕಿನ ಕೈಗಾರಿಕೆಗಳು ಭಾರತ ಸರ್ಕಾರದ ವಶದಲ್ಲಿವೆ. ಕರ್ನಾಟಕದಲ್ಲಿರುವ ಭದ್ರಾವತಿಯ ಕಾರ್ಖಾನೆ ಸಣ್ಣ ಪ್ರಮಾಣದ್ದು. ಇಲ್ಲಿ ಮುಖ್ಯವಾಗಿ ಮಿಶ್ರಲೋಹಗಳನ್ನು ತಯಾರಿಸಲಾಗುತ್ತಿದೆ. ಈ ಕೈಗಾರಿಕೆ ಕರ್ನಾಟಕ ರಾಜ್ಯ ಸರ್ಕಾರದ ವಶದಲ್ಲಿದೆ.
	ಮ್ಯಾಂಗನೀಸ್ ಅದುರು: ಭಾರತ ದೇಶ ಮ್ಯಾಂಗನೀಸ್ ಅದುರನ್ನು ಉತ್ಪಾದಿಸುವ ದೇಶಗಳಲ್ಲಿ ಮುಖ್ಯವಾದುದು. ಇಲ್ಲಿಯ ನಿಕ್ಷೇಪಗಳಿಂದ ಒಟ್ಟು 99 ಮಿಲಿಯನ್ ಟನ್ನುಗಳಷ್ಟು ಅದುರ ಪಡೆಯಬಹುದೆಂದು ಅಂದಾಜು. ಮ್ಯಾಂಗನೀಸ್ ಅದುರು ಮುಖ್ಯವಾಗಿ ಮಹಾರಾಷ್ಟ್ರ. ಮಧ್ಯಪ್ರದೇಶ ಬಿಹಾರ, ಒರಿಸ್ಸ, ಗೋವ ಮತ್ತು ಕರ್ನಾಟಕ ರಾಜ್ಯಗಳಲ್ಲಿ ದೊರೆಯುತ್ತದೆ. ಮುಖ್ಯವಾದ ಗಣಿಗಳಿರುವುದು ನಾಗಪುರದ ಬಳಿಯ ಭಂಡಾರ ಬಾಲಘಾಟ್ ಪ್ರದೇಶಗಳಲ್ಲಿ. ಬಳ್ಳಾರಿ ಜಿಲ್ಲೆಯ ಸೊಂಡೂರಿನ ಬಳಿಯ ಮ್ಯಾಂಗನೀಸ್ ಅದುರಿನ ಗಣಿಗಳು ಪ್ರಸಿದ್ಧವಾದವು.	
	ವರ್ಷಂಪ್ರತಿ ಸುಮಾರು 1.8 ಮಿಲಿಯನ್ ಟನ್ನುಗಳಷ್ಟು ಅದುರನ್ನು ಉತ್ಪಾದಿಸಲಾಗುತ್ತಿದೆ. ಇದರ ಮೌಲ್ಯ ರೂ 175.936.000.
ಪಟ್ಟಿ 9. ವಿವಿಧ ರಾಜ್ಯಗಳಲ್ಲಿಯ ಮ್ಯಾಂಗನೀಸ್ ಅದುರಿನ ಉತ್ಪನ್ನ (1977)
ರಾಜ್ಯ

ಉತ್ಪಾದನೆ (ಟನ್ನುಗಳಲ್ಲಿ)

ಮೌಲ್ಯ (ಸಾವಿರ ರೂಪಾಯಿಗಳಲ್ಲಿ)

ಆಂಧ್ರ
. . .
151,512
. . .
6,250

ಗೋವಾ
. . .
76,123
. . .
3,368

ಕರ್ನಾಟಕ
. . .
481,345
. . .
39,051

ಮಧ್ಯಪ್ರದೇಶ
. . .
243,264
. . .
52,157

ಮಹಾರಾಷ್ಟ್ರ
. . .
184,571
. . .
31,237

ಒರಿಸ್ಸ
. . .
699,906
. . .
43,589

ಕ್ರೋಮೈಟ್: ತುಕ್ಕು ಹಿಡಿಯದ ಉಕ್ಕಿನ ತಯಾರಿಕೆಯಲ್ಲಿ ಅತಿ ಮುಖ್ಯ ಖನಿಜ. ನಿಕ್ಷೇಪಗಳು ಕರ್ನಾಟಕ ಮತ್ತು ಒರಿಸ್ಸಾದಲ್ಲಿ ಇವೆ. 1977ರಲ್ಲಿ 352.234 ಟನ್ ಉತ್ಪಾದನೆ. ಇದರಲ್ಲಿ ಅಧಿಕ ಭಾಗ ರಫ್ತಾಗುತ್ತಿದೆ. ಕರ್ನಾಟಕ ರಾಜ್ಯದಲ್ಲಿ ಮುಖ್ಯವಾದ ಗಣಿಗಳು ಚನ್ನರಾಯಪಟ್ಟಣ ತಾಲ್ಲೂಕಿನ ಬೈರಾಪುರ, ಭಕ್ತರಹಳ್ಲಿ, ಜಂಬೂರು, ನುಗ್ಗಿಹಳ್ಳಿ ಬಳಿ ಇವೆ.
	ನಿಕಲ್: ಮಿಶ್ರಲೋಹಗಳ ತಯಾರಿಕೆಯಲ್ಲಿ ಇದರದು ಮುಖ್ಯ ಪಾತ್ರ. ಭಾರತದಲ್ಲಿ ಇನ್ನೂ ಇದರ ಉತ್ಪತ್ತಿ ಇಲ್ಲ. ಉಕ್ಕಿನ ಕೈಗಾರಿಕೆಗೆ ವರ್ಷಂಪ್ರತಿ ಸುಮಾರು 2,500 ಟನ್ನುಗಳಷ್ಟು ನಿಕಲ್ ಬೇಕಾಗುತ್ತದೆ. ಇದನ್ನು ವಿದೇಶಗಳಿಂದ ಆಮದುಮಾಡಿಕೊಳ್ಳಲಾಗುತ್ತಿದೆ. ಒರಿಸ್ಸಾ ರಾಜ್ಯದ ಸುಕಿಂದ ಬಳಿ ನಿಕಲ್ ಅದುರನ್ನು ಪತ್ತೆ ಹಚ್ಚಲಾಗಿದೆ. ಇಲ್ಲಿ ಗಣಿಯನ್ನು ಅಭಿವೃದ್ಧಿಪಡಿಸಿ ದೇಶಕ್ಕೆ ಬೇಕಾದ ನಿಕಲ್ ಲೋಹ ಪಡೆಯುವ ಕಾರ್ಯ ಬೇಗ ಕೈಗೊಳ್ಳಬೇಕಾಗಿದೆ.
	ಕಬ್ಬಿಣಸಂಬಂಧವಲ್ಲದೆ ಲೋಹ ಖನಿಜಗಳು: ಮೇಲೆ ವಿವಿರಿಸಿದ ಕಬ್ಬಿಣ ಸಂಬಂಧದ ಲೋಹಗಳೇನೊ ಭಾರತದಲ್ಲಿ ಅಗತ್ಯ ಪೂರೈಸುವಷ್ಟು ಪ್ರಮಾಣದಲ್ಲಿ ದೊರೆತಿವೆ. ಆದರೆ ಕಬ್ಬಿಣ ಸಂಬಂಧವಲ್ಲದ ಲೋಹ ಖನಿಜಗಳು ಮಾತ್ರ ಹೇರಳ ಪ್ರಮಾಣದಲ್ಲಿ ದೊರೆಯದೆ ಹೋಗಿವೆ. ಈ ತನಕ ಪತ್ತೆಯಾಗಿರುವ ನಿಕ್ಷೇಪಗಳು ಸಣ್ಣವು. ಅವುಗಳಲ್ಲಿ ದೊರೆಯುವ ಅದುರಿನಲ್ಲಿ ಲೋಹಾಂಶ ಕಡಿಮೆ. ಇದೇ ಕಾರಣವಾಗಿ ಹೇರಳ ಹಣ ವ್ಯಯಮಾಡಿ ವಿದೇಶಗಳಿಂದ ನಮಗೆ ಬೇಕಾಗುವ ತಾಮ್ರ, ಸೀಸ, ತವರ ಮುಂತಾದ ಕಬ್ಬಿಣ ಸಂಬಂಧವಲ್ಲದೆ ಲೋಹಗಳನ್ನು ಆಮದು ಮಾಡಿಕೊಳ್ಳಬೇಕಾಗಿದೆ. ಈ ಲೋಹ ಖನಿಜಗಳ ಅನ್ವೇಷಣೆ ಕಾರ್ಯ ತ್ವರೆಯಿಂದ ಸಾಗುತ್ತಿದೆ.
	ಅಲ್ಯೂಮಿನಿಯಮ್: ಈಚಿನ ವರ್ಷಗಳಲ್ಲಿ ಈ ಲೋಹದ ಮುಖ್ಯ ಅದುರು ಬಾಕ್ಸೈಟನ್ನು ಒರಿಸ್ಸ ಮತ್ತು ಆಂಧ್ರಪ್ರದೇಶಗಳಲ್ಲಿ ಪತ್ತೆಮಾಡಲಾಗಿದೆ. ಇಲ್ಲಿಯ ಅದುರನ್ನು ಉಪಯೋಗಿಸಿ ಅಲ್ಯೂಮಿನಿಯಮ್ ಲೋಹವನ್ನು ತಯಾರಿಸುವ ಬೃಹತ್ ಯೋಜನೆಗಳು ರೂಪುಗೊಳ್ಳುತ್ತಿವೆ. ಭಾರತದಲ್ಲಿ ಅಲ್ಯೂಮಿನಿಯಮ್ ಅದುರು ದೊರೆಯುವ ಪ್ರಮಾಣ 1,500 ಮಿಲಿಯನ್ ಟನ್ನುಗಳೆಂದು ಅಂದಾಜು.
	ಭಾರತದಲ್ಲಿ ಅಲ್ಯೂಮಿನಿಯಮ್ ಲೋಹ ಕೈಗಾರಿಕೆ ಒಂದೇ ಸಮನೆ ಅಭಿವೃದ್ಧಿಗೊಳ್ಳುತ್ತ ಬಂದಿದೆ. 1977ರಲ್ಲಿ ರೂ. 1,270,634,000 ಬೆಲೆಬಾಳುವ 183,854 ಟನ್ ಅಲ್ಯೂಮಿನಿಯಮ್ ಲೋಹ ಉತ್ಪತ್ತಿಯಾಯಿತು. ಈ ಲೋಹದ ತಯಾರಿಕೆಗೆ ಹೇರಳ ವಿದ್ಯುಚ್ಛಕ್ತಿ ಬೇಕು. ಇದರ ಅಭಾವದಿಂದಾಗಿ ಲೋಹ ಉತ್ಪಾದನೆ ಇನ್ನೂ ಹೆಚ್ಚದೆ ಇದೆ.
	ಸದ್ಯದಲ್ಲಿ ನಾಲ್ಕು ಮುಖ್ಯ ಕಂಪನಿಗಳು ಅಲ್ಯೂಮಿನಿಯಮ್ ಲೋಹವನ್ನು ಉತ್ಪಾದಿಸುತ್ತಿವೆ. ಹಿಂದೂಸ್ಥಾನ್ ಅಲ್ಯೂಮಿನಿಯಮ್ ಕಂಪನಿ (ಹಿಂಡಾಲಕೊ, 95,000 ಟನ್), ಇಂಡಿಯನ್ ಅಲ್ಯೂಮಿನಿಯಮ್ ಕಂಪನಿ (ಇಂಡಾಲ್ 103,000 ಟನ್), ಭಾರತ ಸರ್ಕಾರದ ಭಾರತ್ ಅಲ್ಯೂಮಿನಿಯಮ್ ಕಂಪನಿ (25,000 ಟನ್), ತಮಿಳುನಾಡಿನ ಮೆಟ್ಟೂರು ಬಳಿ ಇರುವ ಮದರಾಸ್ ಅಲ್ಯೂಮಿನಿಯಮ್ ಕಂಪನಿ (21,000 ಟನ್) ಮತ್ತು ಅಲ್ಯೂಮಿನಿಯಮ್ ಕಾರ್ಪೊರೇಷನ್ ಆಫ್ ಇಂಡಿಯಾ (9,000 ಟನ್).
	ಆಂಧ್ರಪ್ರದೇಶ ಮತ್ತು ಒರಿಸ್ಸಾ ರಾಜ್ಯಗಳಲ್ಲಿ ಈಚೆಗೆ ಪತ್ತೆ ಹಚ್ಚಲಾದ ಹೇರಳವಾದ ಬಾಕ್ಸೈಟ್ ಅದುರನ್ನು ಉಪಯೋಗಿಸಿ ವರ್ಷಂಪ್ರತಿ 500,000 ಟನ್ ಅಲ್ಯೂಮಿನಿಯಮ್ ಲೋಹ ತಯಾರಿಸುವ ಎರಡು ಬೃಹತ್ ಯೋಜನೆಗಳು ಭಾರತ ಸರ್ಕಾರದ ಮುಂದಿವೆ. ಇವು ಕಾರ್ಯರೂಪಕ್ಕೆ ಬಂದಾಗ ಭಾರತ ಅಲ್ಯೂಮಿನಿಯಮ್ ಲೋಹ ತಯಾರಿಕೆಯಲ್ಲಿ ಮುಖ್ಯ ಸ್ಥಾನ ಪಡೆಯುತ್ತದೆ.
	ತಾಮ್ರ: ಅನಾದಿಕಾಲದಿಂದಲೂ ಭಾರತದಲ್ಲಿ ಬಳಕೆಯಲ್ಲಿರುವ ಲೋಹ, ತಾಮ್ರ, ಹಿತ್ತಾಳೆ, ಕಂಚು ಈ ರೂಪಗಳಲ್ಲಿ ತಾಮ್ರ ಲೋಹವನ್ನು ಭಾರತದ ಸಾಮನ್ಯ ಜನ ಬಲು ಹಿಂದಿನ ಕಾಲದಿಂದಲೂ ಉಪಯೋಗಿಸುತ್ತ ಬಂದಿದ್ದಾರೆ. ಪುರಾತನರು ಕೆಲಸಮಾಡಿ ಕೈಬಿಟ್ಟ ಗಣಿಗಳು ದೇಶದಲ್ಲಿ ಅನೇಕ ಕಡೆ ಕಾಣಿಸುತ್ತವೆ. ಹಾಗಾದರೂ ಸದ್ಯ ಭಾರತದಲ್ಲಿ ಉತ್ಪತ್ತಿಯಾಗುತ್ತಿರುವ ತಾಮ್ರ ಲೋಹದ ಪ್ರಮಾಣ ತೀರ ಕಡಿಮೆ. ಬೆಳೆಯುತ್ತಿರುವ ಕೈಗಾರಿಕೆಗಳ ಅಗತ್ಯವನ್ನು ಪೂರೈಸುವುದಕ್ಕೆ ಆಗುತ್ತಿಲ್ಲ. 1977ರಲ್ಲಿ 23,489 ಟನ್ನುಗಳಷ್ಟು ತಾಮ್ರವನ್ನು ಮಾತ್ರ ಉತ್ಪಾದಿಸಲಾಯಿತು. ತಾಮ್ರದ ಮುಖ್ಯ ಗಣಿಗಳು ಬಿಹಾರದ ಸಿಂಗಭೂಮಿ ಜಿಲ್ಲೆಯಲ್ಲೂ ರಾಜಸ್ಥಾನದ ಖೇತ್ರಿ ಬಳಿಯೂ ಇವೆ. ಮಧ್ಯಪ್ರದೇಶದ ಬಾಲಘಟ ಜಿಲ್ಲೆಯ ಮಲಂಜಖಂಡ ಎನ್ನುವ ಕಡೆ ದೊಡ್ಡ ಪ್ರಮಾಣದಲ್ಲಿ ತಾಮ್ರಕ್ಕಾಗಿ ಗಣಿ ತೋಡುವ ಕೆಲಸ ಮೊದಲಾಗಿದೆ.
	ಕರ್ನಾಟಕ ರಾಜ್ಯದಲ್ಲಿಯ ತಾಮ್ರನಿಕ್ಷೇಮಗಳು ಸಣ್ಣವು. ಚಿತ್ರದುರ್ಗ ಕಾಪರ್ ಕಂಪನಿ 1968ರಲ್ಲಿ ಅಸಂಭವಾಗಿ ಚಿತ್ರದುರ್ಗ ಜಿಲ್ಲೆಯ ಇಂಗಳದಾಳುವಿನ ಬಳಿ ತಾಮ್ರ ಗಣಿಗಾರಿಕೆಯನ್ನು ಸ್ಥಾಪಿಸಿದೆ. ಈ ಗಣಿಗಳಿಂದ ಸುಮಾರು ಎರಡು ಸಾವಿರ ಟನ್‍ತಾಮ್ರ ಸಾರವನ್ನು ಉತ್ಪಾದಿಸಿ ಬಿಹಾರದಲ್ಲಿರುವ ಕುಲುಮೆಗಳಿಗೆ ರವಾನಿಸಲಾಗುತ್ತಿದೆ. ತಾಮ್ರ ಗಣಿ ಕೈಗಾರಿಕೆಯನ್ನು ರಾಜ್ಯದಲ್ಲಿ ಅಭಿವೃದ್ಧಿಗೊಳಿಸಲು ಕೂಟ ಎಂಬ ಹೆಸರಿನ ಸಂಸ್ಥೆಯೊಂದನ್ನು ಸ್ಥಾಪಿಸಿದೆ. ಇದು ಹಾಸನ ಜಿಲ್ಲೆಯ ಕಲ್ಯಾಡಿ ಬಳಿ ತಾಮ್ರಕ್ಕಾಗಿ ಗಣಿಕಾರ್ಯವನ್ನು ಕೈಗೊಂಡಿದೆ.
	ಸೀಸ ಮತ್ತು ಸತುವು: ಸೀಸ ಮತ್ತು ಸತುವು ಆಧುನಿಕ ಕೈಗಾರಿಕೆಗಳಲ್ಲಿ ಅಗತ್ಯವಾಗಿ ಬೇಕಾಗುವ ಲೋಹಗಳು. ಇವುಗಳ ನಿಕ್ಷೇಪಗಳು ದೇಶದಲ್ಲಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿಲ್ಲ. ಮುಖ್ಯವಾದ ಗಣಿ ರಾಜಸ್ಥಾನದ ಉದಯಪುರ ಜಿಲ್ಲೆಯ ಸವಾರ್ ಬಳಿ ಇದೆ. ಇಲ್ಲಿಯ ಗಣಿಗಳಿಂದ ಸುಮಾರು 8.000 ಟನ್ ಸೀಸವನ್ನೂ 36.000 ಟನ್ ಸತುವನ್ನು ಉತ್ಪಾದಿಸಲಾಗುತ್ತಿದೆ ಆಂಧ್ರಪ್ರದೇಶದ ಅಗ್ನಿಗುಂಡಲ ಬಳಿ ಸಣ್ಣ ಪ್ರಮಾಣದಲ್ಲಿ ಸೀಸದ ಗಣಿಯೊಂದು ಕೆಲಸ ಮಾಡುತ್ತಿದೆ. ವಿಶಾಖಪಟ್ಟಣದ ಬಳಿ ಹತ್ತು ಸಾವಿರ ಟನ್ ಸೀಸ ಲೋಹವನ್ನು ಕರಗಿಸುವ ಕಾರ್ಖಾನೆ ರೂಪುಗೊಳ್ಳುತ್ತಿದೆ.

ಪಟ್ಟಿ 10: ಈಚಿನ ವರ್ಷಗಳಲ್ಲಿ ಭಾರತದ ಮುಖ್ಯ ಲೋಹಗಳ ಉತ್ಪತ್ತಿ ಸಾವಿರ ಟನ್ನುಗಳಲ್ಲಿ
ಲೋಹ

1974
1975
1976
1977

ಉಕ್ಕು
. . .
5,500
6,500
9,400
9,850

ಅಲ್ಯೂಮಿನಿಯಮ್
. . .
129
166
211
184

ತಾಮ್ರ
. . .
16
22
25
23

ಸತುವು
. . .
22
27
30
36

ಸೀಸ
. . .
3
5
6
8

ಬಂಗಾರ (ಟನ್ನುಗಳಲ್ಲಿ)
. . .
3.14
2.82
3.13
2.85

	
ಚಿನ್ನ ಮತ್ತು ಬೆಳ್ಳಿ: ಬೆಳ್ಳಿ ಬಂಗಾರುಗಳು ಬಲು ಹಿಂದಿನ ಕಾಲದಿಂದಲೂ ಬಳಕೆಯಲ್ಲಿರುವ ಅಮೂಲ್ಯ ಲೋಹಗಳು. ಅವುಗಳ ಮಿರಮಿರುಗುವ ಬಣ್ಣ. ತೂಕ, ಕಿಲುಬುಹಿಡಿಯದಿರುವ ಗುಣ. ಅವಕ್ಕೆ ಹೆಚ್ಚಿನ ಪ್ರಾಶಸ್ತ್ಯ ಒದಗಿಸಿ ಬೆಳ್ಳಿ ಲೋಹದ ಬಳಕೆ ಸಾಮಾನ್ಯವಾಗಿದ್ದರೂ ಬೆಳ್ಳಿ ಗುಡ್ಡ, ರಜತಾದ್ರಿ ಎಂಬ ಹೆಸರುಳ್ಳ ಬೆಟ್ಟಗಳಿದ್ದರೂ ಬೆಳ್ಳಿಗೆಂದೇ ತೋಡಿರುವ ಗಣಿಗಳು ಯಾವುವೂ ಭಾರತದಲ್ಲಿ ಕಂಡುಬಂದಿಲ್ಲ. ಸೀಸ ಲೋಹದೊಂದಿಗೆ ಮಿಶ್ರಣ ಹೊಂದಿ ಸುಮಾರು 3,000 ಕೆಜಿಯಷ್ಟು ಬೆಳ್ಳಿ ದೇಶದಲ್ಲಿ ಉತ್ಪತ್ತಿಯಾಗುತ್ತಿದೆ. ಬಂಗಾರದ ಗಣಿಗಳು ಮಾತ್ರ ಮುಖ್ಯವಾಗಿ ಕರ್ನಾಟಕ ರಾಜ್ಯದ ಹಲವಾರು ಕಡೆ ಕಾಣಸಿಗುತ್ತವೆ. ಈ ಹಳೆಯ ಗಣಿಗಳು ಬಲು ಹಿಂದಿನ ಕಾಲದಲ್ಲಿ ಪುರಾತನರು ಕೆಲಸಮಾಡಿ ಕೈಬಿಟ್ಟ ಗಣಿಗಳು. ಇವುಗಳಲ್ಲಿ ಕೋಲಾರಜಿಲ್ಲೆಯ ಉರಿಗಾಮ್ ಬಳಿಯೂ ರಾಯಚೂರು ಜಿಲ್ಲೆಯ ಹಟ್ಟಿ ಬಳಿಯೂ ಗಣಿಕಾರಿಕೆ ಅಭಿವೃದ್ಧಿ ಹೊಂದುತ್ತ ಬಂದಿದೆ. ಕೋಲಾರದ ಚಿನ್ನದ ಗಣಿಗಳು ಭೂಮಿಯೊಳಗೆ 3660 ಮೀಟರುಗಳಷ್ಟು ಅಳ ಇಳಿದಿವೆ. ಪ್ರಪಂಚದಲ್ಲೆಲ್ಲ ಅತಿ ಆಳವಾದ ಚಿನ್ನದ ಗಣಿಗಳೆಂದು ಪ್ರಸಿದ್ಧಿ ಪಡೆದುಕೊಂಡಿವೆ. ಚಿನ್ನದ ಗಣಿಗಾರಿಕೆ ಇಪ್ಪತ್ತು ಸಾವಿರಕ್ಕೂ ಮೇಲ್ಪಟ್ಟು ಕಾರ್ಮಿಕರಿಗೆ ಉದ್ಯೋಗಾವಕಾಶ ಕಲ್ಪಿಸಿದೆ.
	ಭಾರತದಲ್ಲಿ ಉತ್ಪನ್ನವಾಗುವ ಚಿನ್ನವೆಲ್ಲವೂ ಕರ್ನಾಟಕ ರಾಜ್ಯದ ಗಣಿಗಳಿಂದ ಬಂದುದು. ಬೇರೆ ಯಾವ ರಾಜ್ಯದಲ್ಲಿಯೂ ಚಿನ್ನ ಉತ್ಪತ್ತಿಯಾಗುತ್ತಿಲ್ಲ. ಈಚಿನ ವರ್ಷಗಳಲ್ಲಿ ವರ್ಷಂಪ್ರತಿ 3,000 ಕೆಜಿ ತೂಗುವ ಚಿನ್ನ ಉತ್ಪತಿಯಾಗುತ್ತಿದೆ. ಪ್ರಪಂಚದ ಉತ್ಪನ್ನದಲ್ಲಿ ಇದು ಶೇಕಡಾ 1ರಷ್ಟು ಭಾಗ ಮಾತ್ರ. ಕೋಲಾರದ ಚಿನ್ನದ ಗಣಿಗಳಲ್ಲಿ ಚಿನ್ನದ ಉತ್ಪನ್ನ ವರ್ಷ ಕಳೆದಂತೆ ಕಡಿಮೆ ಆಗುತ್ತಿದೆ. ಉತ್ತಮ ದರ್ಜೆಯ ಅದುರು ದೊರೆಯದೆ ಹೋಗಿರುವುದೇ ಇದರ ಕಾರಣ. ಹಿಂದೆ ಒಂದು ಟನ್ ಅದುರಿನಲ್ಲಿ 20 ಗ್ರಾಮ್‍ವರೆಗೂ ಚಿನ್ನ ದೊರೆಯುತ್ತಿತ್ತು. ಈಗ 4 ಗ್ರಾಮ್ ದೊರೆಯುವುದೂ ಕಷ್ಟವಾಗುತ್ತಿದೆ. ಚಿನ್ನದ ಬೆಲೆ ವಿಪರೀತವಾಗಿ ಏರಿರುವುದರಿಂದ ಕಡಿಮೆ ದರ್ಜೆಯ ಅದುರನ್ನು ಪುಡಿಮಾಡಿ ಚಿನ್ನವನ್ನೂ ಲಾಭದಾಯಕವಾಗಿ ಪಡೆಯಲು ಸಾಧ್ಯವಾಗಿದೆ. ದೇಶದಲ್ಲಿ ಇರುವ ಇತರ ಹಳೆಯ ಚಿನ್ನದ ಗಣಿಗಳನ್ನು ಊರ್ಜಿತಗೊಳಿಸುವ ಕಾರ್ಯತ್ವರೆಯಿಂದ ಕೈಗೊಳ್ಳಬೇಕಾಗಿದೆ.
	ಯುರೇನಿಯಮ್ ಮತ್ತು ತೋರಿಯಮ್: ಈ ಲೋಹಗಳು ಪರಮಾಣು ಶಕ್ತಿಗೆ ಸಂಬಂಧಪಟ್ಟವು. ತೋರಿಯಮ್ ಲೋಹ ಕೇರಳದ ಕಡಲಂಚಿನಲ್ಲಿರುವ ಮರಳುರಾಶಿಯಲ್ಲಿ ತೋರಿಯನೈಟ್ ಮತ್ತು ಮಾನಸೈಟ್ ರೂಪದಲ್ಲಿ ದೊರೆಯುತ್ತದೆ. ಈ ಲೋಹವನ್ನು ಪರಮಾಣುಶಕ್ತಿ ಉತ್ಪಾದನೆಗೆ ಬಳಸುವ ಸಾಧ್ಯತೆ ಉಂಟು. ಅದಕ್ಕಾಗಿ ಶೋಧನೆ ನಡೆಯುತ್ತಿದೆ. ಪರಮಾಣು ಶಕ್ತಿ ಉತ್ಪಾದನೆ ಮುಖ್ಯವಾಗಿ ಉಪಯೋಗವಾಗುತ್ತಿರುವ ಯುರೇನಿಯಮ್ ಧಾತು ಬಿಹಾರದ ಜಾದುಗುಡ ಎಂಬಲ್ಲಿ ದೊರೆಯುತ್ತದೆ.
	ಆ್ಯಂಟಿಮೊನಿ, ಆರ್ಸೆನಿಕ್, ಬಿಸ್ಮತ್ ಮತ್ತು ಪಾದರಸ: ಕೈಗಾರಿಕೆಗಳಲ್ಲಿ ಉಪಯೋಗವಾಗುವ ಆ್ಯಂಟಿಮೊನಿ, ಆರ್ಸೆನಿಕ್, ಬಿಸ್ಮತ್ ಮತ್ತು ಪಾದರಸ ಈ ಲೋಹಗಳು ಭಾರತದಲ್ಲಿ ಈ ತನಕ ದೊರೆತಿಲ್ಲ. ಕೈಗಾರಿಕೆಗಳಿಗೆ ಬೇಕಾಗುವ ಈ ಲೋಹಗಳನ್ನು ಹೊರದೇಶಗಳಿಂದ ಆಮದು ಮಾಡಿಕೊಳ್ಳಬೇಕಾಗಿದೆ.
	ಲೋಹ ಸಂಬಂಧವಿಲ್ಲದ ಕೆಲವು ಕೈಗಾರಿಕೋಪಯೋಗಿ ಖನಿಜಗಳು. ಸುಣ್ಣ ಕಲ್ಲು: ಸಿಮೆಂಟ್ ತಯಾರಿಕೆಯಲ್ಲಿ ಮುಖ್ಯ ಪಾತ್ರವಹಿಸಿರುವ ಖನಿಜ ಇದು. ಭಾರತದಲ್ಲಿ ಹೇರಳವಾಗಿ ದೊರೆಯುತ್ತದೆ. ದೊರೆಯಬಹುದಾದ ಸುಣ್ಣಕಲ್ಲಿನ ಪ್ರಮಾಣ 50,000 ಮಿಲಿಯನ್ ಟನ್ನುಗಳೆಂದು ಅಂದಾಜು. ಭಾರತದ ವಿವಿಧ ರಾಜ್ಯಗಳಲ್ಲಿ 1977ನೆಯ ಸಾಲಿನಲ್ಲಿ ಉತ್ಪತ್ತಿಯಾದ ಸುಣ್ಣಕಲ್ಲಿನ ಪ್ರಮಾಣವನ್ನೂ ಅದರ ಮೌಲ್ಯವನ್ನೂ ಕೆಳಗಿನ ಪಟ್ಟಿಯಲ್ಲಿ ಕಾಣಿಸಿದೆ.
ಪಟ್ಟಿ 11. ಭಾರತದಲ್ಲಿ 1977ರ ಸಾಲಿನಲ್ಲಿ ಸುಣ್ಣಕಲ್ಲಿನ ಉತ್ಪಾದನೆ

ರಾಜ್ಯ

ಪ್ರಮಾಣ ಟನ್ನುಗಳಲ್ಲಿ

(ಮೌಲ್ಯ ಸಾವಿರ ರೂಪಾಯಿಗಳಲ್ಲಿ)

ಆಂಧ್ರಪ್ರದೇಶ
. . . 
2,888,490
. . .
36,983

ಅಸ್ಸಾಮ್
. . .
81,937
. . .
1,695

ಬಿಹಾರ
. . .
2,309,997
. . .
68,900

ಗುಜರಾತ್
. . .
2,802,464
. . .
2,939

ಹರಿಯಾನ
. . .
476,644
. . .
9,751

ಹಿಮಾಚಲ
. . .
64,580
. . .
1,159

ಜಮ್ಮು ಕಾಶ್ಮೀರ
. . .
15,750
. . .
219

ಕರ್ನಾಟಕ
. . .
2,350,030
. . .
29,571

ಮಧ್ಯಪ್ರದೇಶ
. . .
6,528,715
. . .
107,839

ಮಹಾರಾಷ್ಟ್ರ
. . .
695,088
. . .
12,396

ಮೇಘಾಲಯ
. . .
99,965
. . .
2,199

ಒರಿಸ್ಸ
. . .
2,932,943
. . .
93,452

ರಾಜಸ್ಥಾನ
. . .
3,101,745
. . .
51,268

ತಮಿಳುನಾಡು
. . .
4,404,547
. . .
79,834

ಉತ್ತರಪ್ರದೇಶ
. . .
1,437,586
. . .
21,751

ಪಶ್ಚಿಮಬಂಗಾಳ
. . .
10,409
. . .
164

	ಸಿಮೆಂಟ್ ತಯಾರಿಕೆಯಲ್ಲಲ್ಲದೆ ಕಬ್ಬಿಣ ಮತ್ತು ಉಕ್ಕಿನ ತಯಾರಿಕೆಯಲ್ಲಿ ಕೂಡ ಸುಣ್ಣಕಲ್ಲು ಉಪಯೋಗವಾಗುತ್ತದೆ. ಕರ್ನಾಟಕ ರಾಜ್ಯದಲ್ಲಿಯ ಸುಣ್ಣಕಲ್ಲು ನಿಕ್ಷೇಪಗಳು ದೊಡ್ಡವು. ಇಲ್ಲಿ ಆರು ಮುಖ್ಯ ಸಿಮೆಂಟ್ ಕಾರ್ಖಾನೆಗಳಿದ್ದು ಇವುಗಳಲ್ಲಿ ಇಪ್ಪತ್ತು ಲಕ್ಷಟನ್ ಸಿಮೆಂಟ್ ಉತ್ಪತ್ತಿಯಾಗುತ್ತಿದೆ.
	ಸಣ್ಣ ಪ್ರಮಾಣದಲ್ಲಿ ಸಿಮೆಂಟ್ ಉತ್ಪಾದಿಸಲು ಮಿನಿ ಸಿಮೆಂಟ್ ಕಾರ್ಖಾನೆಗಳನ್ನು ಸ್ಥಾಪಿಸಲಾಗಿದೆ.
	ಕಲ್ನಾರು: ಉತ್ಕøಷ್ಟ ದರ್ಜೆಯ ಕಲ್ನಾರು ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿಯೂ ಕಡಿಮೆ ದರ್ಜೆಯ ಕಲ್ನಾರು ಬಿಹಾರ, ರಾಜಸ್ಥಾನ ಮತ್ತು ಕರ್ನಾಟಕದಲ್ಲಿಯೂ ದೊರೆಯುತ್ತದೆ. ಇದರ ಮುಖ್ಯ ಉಪಯೋಗ ಸಿಮೆಂಟ್‍ಕಲ್ನಾರು ಹಲಗೆಗಳನ್ನು ತಯಾರಿಸುವುದರಲ್ಲಿದೆ. ಉತ್ತಮ ದರ್ಜೆಯ ಕಲ್ನಾರು ಸಾಕಸ್ಟು ಪ್ರಮಾಣದಲ್ಲಿ ದೊರೆಯದಿರುವುದರಿಂದ ಅದನ್ನು ಹೊರದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ.
	ಬೆರೈಟಿಸ್: ಪಟ್ರೋಲ್ ಶೋಧನೆಯಲ್ಲಿ ಮತ್ತು ಬಣ್ಣಗಳನ್ನು ತಯಾರಿಸುವುದರಲ್ಲಿ ಉಪಯೋಗವಾಗುವ ಇದರ ಮುಖ್ಯ ನಿಕ್ಷೇಪಗಳು ಆಂಧ್ರಪ್ರದೇಶದ ತಿರುಪತಿ ಬಳಿ ಇವೆ. ವರ್ಷಂಪ್ರತಿ ಸುಮಾರು ಮೂರು ಲಕ್ಷ ಟನ್ ಉತ್ಪತ್ತಿಯಾಗುತ್ತಿದೆ. ಇದರ ಬೆಲೆ ರೂ 16,362,000. ಈ ಕೈಗಾರಿಕೆ ಇನ್ನೂ ಹೆಚ್ಚಾಗಿ ಅಭಿವದ್ಧಿಹೊಂದುವ ನಿರೀಕ್ಷೆ ಇದೆ.
	ಫಾಸ್ಛೊರೈಟ್ (ರಂಜಕ ಕಲ್ಲು): ಶೇಕಡಾ 30ಕ್ಕಿಂತ ಹೆಚ್ಚು ರಂಜಕಾಂಶವನ್ನು ಒಳಗೊಂಡ ಈ ಕಲ್ಲು ಕೃತಕ ಗೊಬ್ಬರಗಳನ್ನು ತಯಾರಿಸುವ ಕೈಗಾರಿಕೆಯಲ್ಲಿ ಪ್ರಸಿದ್ಧಿಯಾಗಿದೆ. ಮುಖ್ಯ ನಿಕ್ಷೇಪಗಳಿರುವುದು ರಾಜಸ್ಥಾನದಲ್ಲಿ. ಪ್ರತಿವರ್ಷ ರೂ 171,000,000 ಬಾಳುವ ಏಳು ಲಕ್ಷಟನ್ ರಂಜಕ ಕಲ್ಲು ಉತ್ಪತ್ತಿಯಾಗುತ್ತಿದೆ.
	ಸುದ್ದೆಮಣ್ಣು: ಪಿಂಗಾಣಿ ವಸ್ತುಗಳ ಮತ್ತು ಅತಿ ಉಷ್ಣವನ್ನು ತಡೆಯಬಲ್ಲ ಕಾವಿಟ್ಟಿಗೆಗಳ ತಯಾರಿಕೆಯಲ್ಲಿಯೂ ಕಾಗದ ಕೈಗಾರಿಕೆಯಲ್ಲಿಯೂ ಸುದ್ದೆಮಣ್ಣು ವಿಶೇಷವಾಗಿ ಉಪಯೋಗವಾಗುತ್ತದೆ. ಭಾರತದ ಒಟ್ಟು ಉತ್ಪತ್ತಿ 434,499 ಟನ್ನುಗಳು. ಇದು ಮುಖ್ಯವಾಗಿ ಆಂಧ್ರಪ್ರದೇಶ, ಬಿಹಾರ, ದೆಹಲಿ ಗುಜರಾತ್, ಕರ್ನಾಟಕ, ಕೇರಳ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳದಲ್ಲಿ ದೊರೆಯುತ್ತದೆ.
	ವಜ್ರ: ಭಾರತ ಒಂದು ಕಾಲದಲ್ಲಿ ವಜ್ರಕ್ಕೆ ಪ್ರಸಿದ್ಧಿಯಾಗಿತ್ತು. ಪ್ರಪಂಚ ಪ್ರಸಿದ್ಧ ವಜ್ರಗಳೆಲ್ಲವೂ ಭಾರತದಿಂದ ಬಂದವು. ಈಚೆಗೆ ಇಲ್ಲಿ ವಜ್ರದ ಉತ್ಪಾದನೆ ಬಹಳವಾಗಿ ಬಿದ್ದುಹೋಗಿದೆ. ರಷ್ಯಾ ಮತ್ತು ದಕ್ಷಿಣ ಆಫ್ರಿಕ ವಜ್ರದ ಉತ್ಪಾದನೆಯಲ್ಲಿ ಮುಖ್ಯಸ್ಥಾನ ಪಡೆದುಕೊಂಡಿವೆ. ಈಗ ಭಾರತದಲ್ಲಿ ವಜ್ರಕ್ಕಾಗಿ ಕೆಲಸ ನಡೆಯುತ್ತಿರುವುದು ಮಧ್ಯಪ್ರದೇಶದ ಪನ್ನಾ ಬಳಿ. ವರ್ಷಂಪ್ರತಿ ಸುಮಾರು 20,000 ಕ್ಯಾರೆಟ್ ತೂಗುವ ವಜ್ರ ಉತ್ಪತ್ತಿಯಾಗುತ್ತಿದೆ. 1977ರಲ್ಲಿ ವಜ್ರದ ಉತ್ಪನ್ನದ ಮೌಲ್ಯ ರೂ 124 ಲಕ್ಷ. ಮಧ್ಯಪ್ರದೇಶದಲ್ಲಿಯ ಗಣಿಗಳನ್ನು ಭಾರತ ಸರ್ಕಾರದ ನ್ಯಾಷನಲ್ ಮಿನರಲ್ ಡೆವಲಪ್‍ಮೆಂಟ್ ಕಾರ್ಪೊರೇಷನ್ (ಎನ್‍ಎಂಡಿಸಿ) ನಡೆಸುತ್ತಿದೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ವಜ್ರಕರೂರು ಬಳಿ ಆಗೊಮ್ಮೆ ಈಗೊಮ್ಮೆ ವಜ್ರಸಿಗುವುದುಂಟು. ಇಲ್ಲಿ ಇನ್ನೂ ಹೆಚ್ಚಿನ ಶೋಧನೆ ನಡೆಯಬೇಕಾಗಿದೆ.
	ಜಿಪ್ಸಮ್: ಸಿಮೆಂಟ್ ತಯಾರಿಕೆಯಲ್ಲಿ ರಾಸಾಯನಿಕ ಗೊಬ್ಬರಗಳ ತಯಾರಿಕೆಯಲ್ಲಿ ಮುಖ್ಯವಾಗಿ ಬೇಕಾದ ಖನಿಜ. ನಿಕ್ಷೇಪಗಳು ರಾಜಸ್ಥಾನದಲ್ಲಿಯೂ ತಮಿಳುನಾಡಿನಲ್ಲಿಯೂ ಇವೆ. ವಾರ್ಷಿಕ ಉತ್ಪನ್ನ ಸುಮಾರು ಎಂಟು ಲಕ್ಷ ಟನ್.
	ಮ್ಯಾಗ್ನಸೈಟ್: ಹಾಲುಗಲ್ಲಿನಂತಿರುವ ಶುಭ್ರವರ್ಣದ ಈ ಖನಿಜ ಮುಖ್ಯವಾಗಿ ವಿಪರೀತ ಉಷ್ಣವನ್ನು ತಡೆಯುವ ಕಾವಿಟ್ಟಿಗೆಗಳನ್ನು ತಯಾರಿಸುವುದರಲ್ಲಿ ಉಪಯೋಗವಾಗುತ್ತದೆ. ಕಬ್ಬಿಣ ಮತ್ತು ಉಕ್ಕು ತಯಾರಿಕೆಗಾಗಿ ಸ್ಥಾಪಿಸಲಾಗುವ ಕುಲುಮೆಗಳನ್ನು ಕಟ್ಟುವುದರಲ್ಲಿ ಇದನ್ನು ಬಳಸಲಾಗುತ್ತಿದೆ. ಮುಖ್ಯ ನಿಕ್ಷೇಪಗಳು ತಮಿಳುನಾಡು ಮತ್ತು ಕರ್ನಾಟಕದಲ್ಲಿವೆ. ಈಚಿನ ವರ್ಷಗಳಲ್ಲಿ ಹಿಮಾಲಯ ತಪ್ಪಲಿನಲ್ಲಿರುವ ಉತ್ತರಪ್ರದೇಶದ ಅಲ್ಮೋರಾ ಬಳಿ ಹೆಚ್ಚು ಪ್ರಮಾಣದಲ್ಲಿ ಮ್ಯಾಗ್ನಸೈಟ್ ದೊರೆಯುವುದು ಕಂಡುಬಂದಿದೆ. ವರ್ಷಂಪ್ರತಿ ಸುಮಾರು ನಾಲ್ಕು ಲಕ್ಷ ಟನ್ ಉತ್ಪತ್ತಿಯಾಗುತ್ತಿದೆ.
	ಮೈಕ (ಕಾಗೆ ಬಂಗಾರ): ವಿದ್ಯುಚ್ಛಕ್ತಿ ಉಪಕರಣಗಳ ತಯಾರಿಕೆಯಲ್ಲಿ ವಿಶೇಷವಾಗಿ ಉಪಯೋಗವಾಗುವ ಖನಿಜ ಇದು. ಭಾರತದ ಮುಖ್ಯ ಖನಿಜ ಸಂಪನ್ಮೂಲಗಳಲ್ಲೊಂದು ಮುಖ್ಯವಾಗಿ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲೂ ಬಿಹಾರದ ಕೋಡರ್ಮ ಜಿಲ್ಲೆಯಲ್ಲೂ ದೊರೆಯುತ್ತದೆ. ಹತ್ತು ಸಾವಿರ ಟನ್ನುಗಳಷ್ಟು ಮೈಕ ಭಾರತದಲ್ಲಿ ಉತ್ಪತ್ತಿಯಾಗುತ್ತಿದೆ. ಎಲ್ಲವೂ ವಿದೇಶಗಳಿಗೆ ರಫ್ತಾಗಿ ಹೋಗುತ್ತಿದೆ.
ವಿದೇಶಗಳೊಡನೆ ಖನಿಜ ವ್ಯಾಪಾರ: ಎಲ್ಲ ಖನಿಜಗಳೂ ಎಲ್ಲ ದೇಶಗಳಲ್ಲೂ ಸಮಸಮವಾಗಿ ಹರಡಿರುವುದಿಲ್ಲ. ಖನಿಜಗಳ ಹಂಚಿಕೆಯಲ್ಲಿ ಅನೇಕ ವ್ಯತ್ಯಾಸಗಳು ಕಾಣುತ್ತವೆ. ಒಂದು ಕಡೆ ಪೆಟ್ರೋಲಿಯಮ್ ಶೇಖರವಾಗಿರುತ್ತದೆ. ಮಿಕ್ಕ ಯಾವ ಖನಿಜಗಳೂ ಇರುವುದಿಲ್ಲ. ಇನ್ನೊಂದು ಕಡೆ ಲೋಹ ಖನಿಜಗಳಿದ್ದು ಅವನ್ನು ಕರಗಿಸಲು ಬೇಕಾಗುವ ಇಂಧನ ಖನಿಜ ಇಲ್ಲದೆ ಇರುತ್ತದೆ. ಇಂಥ ಪರಿಸ್ಥಿತಿಯಲ್ಲಿ ದೇಶದಲ್ಲಿ ದೊರೆಯದೆ ಹೋದ ಖನಿಜಗಳನ್ನು ಬೇರೆದೇಶಗಳಿಂದ ಆಮದು ಮಾಡಿಕೊಳ್ಳಬೇಕಾಗುತ್ತದೆ. ತನ್ನ ಅಗತ್ಯ ಪೂರೈಸಿದ ಬಳಿಕ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ದೊರೆಯುವ ಖನಿಜಗಳನ್ನು ವಿದೇಶಗಳಿಗೆ ರಫ್ತು ಮಾಡಿ ಧನ ಸಂಪಾದನೆ ಮಾಡಬೇಕಾಗುತ್ತದೆ. ಈ ರೀತಿ ದೇಶ ದೇಶಗಳ ನಡುವಿನ ವ್ಯಾಪರದಲ್ಲಿ ಖನಿಜಗಳ ಪಾತ್ರ ಸ್ಥಾನ ಪಡೆಯುತ್ತದೆ.
ಮುಂದುವರಿದ ಜನಾಂಗಗಳು ಖನಿಜಗಳ ಮತ್ತು ಅವುಗಳಿಂದ ಪಡೆದ ಲೋಹಗಳ ಆಧಾರದ ಮೇಲೆ ತಮ್ಮ ನಾಗರಿಕ ಜೀವನವನ್ನು ಬಲುವಾಗಿ ಬೆಳೆಸಿ ಕೊಂಡಿವೆ. ಈ ರಾಜ್ಯಗಳು ತಮಗೆ ಬೇಕಾಗುವ ಖನಿಜಗಳನ್ನು ಪ್ರಪಂಚದ ನಾನಾ ಭಾಗಗಳಿಂದ ತರಿಸಿಕೊಳ್ಳುತ್ತಿವೆ. ಹಿಂದುಳಿದಿರುವ ಜನಾಂಗಗಳಾದರೋ ಲೋಹ ವಿದ್ಯೆಯಲ್ಲಿ ಅಷ್ಟು ಪರಿಶ್ರಮ ಪಡೆಯದೆ ಇರುವುದರಿಂದ, ಖನಿಜಗಳ ಬಳಕೆ ತಿಳಿಯದೆ ಅವನ್ನು ಮುಂದುವರಿದ ಜನಾಂಗಗಳಿಗೆ ಅಗ್ಗದ ಬೆಲೆಗೆ ಮಾರಬೇಕಾಗುತ್ತದೆ. ಖನಿಜ ಕೈಗಾರಿಕೆಯಲ್ಲಿ ಭಾರತ ಇನ್ನೂ ಹಿಂದುಳಿದಿದೆಯೆಂದೇ ಹೇಳಬೇಕು. ಖನಿಜದಲ್ಲಿ ಅಡಗಿರುವ ಲೋಹವನ್ನು ಪಡೆದು ತನ್ಮೂಲಕ ಕೈಗಾರಿಕೆಗಳನ್ನು ಬೆಳೆಸುವ ಜಾಣತನವನ್ನು ಇನ್ನೂ ಅದು ಗಳಿಸಿಕೊಳ್ಳಬೇಕಾಗಿದೆ.
ಭಾರತ ತನಗೆ ಅಗತ್ಯವಾಗಿರುವ ಖನಿಜಗಳನ್ನು ವಿದೇಶಗಳಿಂದ ಆಮದುಮಾಡಿಕೊಳ್ಳುತ್ತಿರುವ ಬಗ್ಗೆ ವಿವರವನ್ನು ಕೆಳಗಿನ ಪಟ್ಟಿಯಲ್ಲಿ ಕೊಟ್ಟಿದೆ. 1976ರಲ್ಲಿ ಈ ಭಾರತ ರೂ 1359 ಕೋಟಿ ಬಾಳುವ ಖನಿಜಗಳನ್ನು ಆಮದು ಮಾಡಿಕೊಳ್ಳಬೇಕಾಯಿತು. ಇದರಲ್ಲಿ ಹೆಚ್ಚಿನ ಪಾಲು ಪೆಟ್ರೋಲ್‍ನದು, 1143 ಕೋಟಿ ರೂಪಾಯಿ ಬಾಳುವ ಪೆಟ್ರೋಲ್ ಆಮದು ಮಾಡಿಕೊಳ್ಳಬೇಕಾಯಿತು. ವರ್ಷಕಳೆದಂತೆ ಈ ಒಂದು ಬಾಬಿಗೇ ಹೇರಳವಾದ ಹಣವನ್ನು ಹೊಂದಿಸಬೇಕಾಗುತ್ತದೆ.
ಪಟ್ಟಿ 12. 1976 ಸಾಲಿನಲ್ಲಿ ಖನಿಜಗಳ ಅಮದು
ಖನಿಜಗಳು

ಪ್ರಮಾಣ (ಟನ್ನುಗಳಲ್ಲಿ)
ಮೌಲ್ಯ (ಸಾವಿರ ರೂಪಾಯಿಗಳಲ್ಲಿ)

47,167
171,010

ವಜ್ರ
. . .

1,400,017

ಪೆಟ್ರೋಲಿಯಮ್
. . .
14,032,000
11,436,913

ರಂಜಕಕಲ್ಲು
. . .
471,521
238,715

ಗಂಧಕ
. . .
588,257
345,097

	ಭಾರತ ಹೊರದೇಶಗಳಿಗೆ ರಫ್ತು ಮಾಡುತ್ತಿರುವ ಖನಿಜಗಳ ವಿವರವನ್ನು ಪಟ್ಟಿ 13ರಲ್ಲಿ ಕೊಟ್ಟಿದೆ. ಕಬ್ಬಿಣದ ಅದುರ ಈ ಪಟ್ಟಿಯಲ್ಲಿ ಮುಖ್ಯವಾದುದೆನ್ನುವುದನ್ನು ಗಮನಿಸಬಹುದು.
ಪಟ್ಟಿ 13. ಮುಖ್ಯ ಖನಿಜಗಳ ರಫ್ತು 1976ರಲ್ಲಿ
ಖನಿಜ

ಪ್ರಮಾಣ (ಟನ್ನುಗಳಲ್ಲಿ)

ಮೌಲ್ಯ (ಸಾವಿರ ರೂಪಾಯಿಗಳಲ್ಲಿ)

ಬೆರೈಟಿಸ್
. . .
151,426
. . .
77,024

ಕ್ರೋಮೈಟ್
. . .
277,798
. . .
263,163

ಇಲ್ಮನೈಟ್
. . .
120,727
. . .
29,941

ಕಬ್ಬಿಣದ ಅದುರು
. . .
23,433,000
. . .
2,324,692

ಮ್ಯಾಂಗನೀಸ್ ಅದುರು
. . .
714,438
. . .
159,509

ಮೈಕ
. . .
21,158
. . .
240,917

ರತ್ನ ಕಲ್ಲುಗಳು
. . .

. . .
204,553

ಅಲಂಕಾರ ಉಪಯೋಗ

ಕಲ್ಲುಗಳು
. . .
155,392
. . .
67,705

	ಖನಿಜಗಳನ್ನು ರಫ್ತುಮಾಡುವುದರಿಂದ ಸುಮಾರು ರೂ 547 ಕೋಟಿ ವಿನಿಮಯ ಹಣವನ್ನು ಗಳಿಸಲು ಸಾಧ್ಯವಾಯಿತು. ಆಮದು ಮಾಡಿಕೊಳ್ಳಲು ಮಾಡಿದ ಕುರ್ಚಿನೊಂದಿಗೆ ಹೋಲಿಸಿದರೆ ರಫ್ತಿನಿಂದ ಬರುವ ಹಣ ಅರ್ಧಕ್ಕೂ ಕಡಿಮೆ ಎಂದು ಮನದಟ್ಟಾಗುತ್ತದೆ. ದೇಶದ ಹಿತದೃಷ್ಟಿಯಿಂದ ಇದು ಒಳ್ಳೆಯದಲ್ಲ. ಸ್ವಾವಲಂಬನೆಯ ಆಧಾರದ ಮೇಲೆ ನಿಲ್ಲಬೇಕಾದರೆ ಖನಿಜಗಳನ್ನು ಆಮದು ಮಾಡಿಕೊಳ್ಳುವುದನ್ನು ಆದಷ್ಟು ಕಡಿಮೆ ಮಾಡಬೇಕು. ಖನಿಜಾನ್ವೇಷಣೆಯ ಕಾರ್ಯ ಇನ್ನೂ ತ್ವರಿತಗತಿಯಲ್ಲಿ ಸಾಗಬೇಕು. ತನ್ನಲ್ಲಿ ದೊರೆಯುವ ಖನಿಜಗಳ ಪೂರ್ಣ ಉಪಯೋಗವನ್ನು ದೇಶದ ಅಭಿವೃದ್ಧಿಗಾಗಿ ಸಾಧಿಸಬೇಕು. 		
(ಬಿ.ಪಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ